July 5, 2026
Sunday, July 5, 2026
spot_img

ಪರೀಕ್ಷಾ ಕೇಂದ್ರ ತಲುಪಲು ಪರದಾಟ: ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ ಅಭ್ಯರ್ಥಿಗಳ ಆಕ್ರೋಶ ಪಾಟಲಿಪುತ್ರ ರೈಲು ನಿಲ್ದಾಣದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಯಿತು. ಪರೀಕ್ಷಾ ಕೇಂದ್ರಗಳಿಗೆ ತಲುಪಲು ಸಮರ್ಪಕ ರೈಲು ವ್ಯವಸ್ಥೆ ಇಲ್ಲ ಎಂದು ಆರೋಪಿಸಿದ ಅಭ್ಯರ್ಥಿಗಳು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.

ಭಾನುವಾರ ನಡೆಯಬೇಕಿದ್ದ ಎರಡು ಪಾಳಿಯ ಪರೀಕ್ಷೆಗಾಗಿ ಸಾವಿರಾರು ಅಭ್ಯರ್ಥಿಗಳು ಶನಿವಾರ ರಾತ್ರಿ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ ನಿರೀಕ್ಷಿತ ಸಂಖ್ಯೆಗೆ ಅನುಗುಣವಾಗಿ ರೈಲುಗಳ ವ್ಯವಸ್ಥೆ ಮಾಡದಿರುವುದರಿಂದ ನಿಲ್ದಾಣದಲ್ಲಿ ಜನಸಂದಣಿ ಹೆಚ್ಚಾಗಿ ಅಸಮಾಧಾನ ಭುಗಿಲೆದ್ದಿತು.

ಪಾಟಲಿಪುತ್ರ-ಕಟಿಹಾರ್ ವಿಶೇಷ ರೈಲಿಗೆ ಏರಲು ಅಭ್ಯರ್ಥಿಗಳು ಮುಗಿಬಿದ್ದ ವೇಳೆ ಪರಿಸ್ಥಿತಿ ಕೈಮೀರಿತು. ಕೆಲವರು ರೈಲು ಸಂಚಾರವನ್ನು ತಡೆದು ಘೋಷಣೆ ಕೂಗಿದರೆ, ಕಲ್ಲು ತೂರಾಟ ಮತ್ತು ಧ್ವಂಸ ಕೃತ್ಯಗಳ ವರದಿಯೂ ಕೇಳಿಬಂದಿದೆ. ಇದರಿಂದ ಹಲವು ಗಂಟೆಗಳ ಕಾಲ ರೈಲು ಸಂಚಾರ ಅಸ್ತವ್ಯಸ್ತಗೊಂಡಿತು.

ಇದನ್ನೂ ಓದಿ:

ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಜನರನ್ನು ಚದುರಿಸಿದರು. ಹಿರಿಯ ಆಡಳಿತ ಮತ್ತು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.

ಕೊನೆಗೆ ಹೆಚ್ಚುವರಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ವಿವಿಧ ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಕಳುಹಿಸಲು ಪರ್ಯಾಯ ಸಾರಿಗೆ ಸೌಲಭ್ಯಗಳನ್ನೂ ಕಲ್ಪಿಸಲಾಯಿತು. ಬಳಿಕ ಪರಿಸ್ಥಿತಿ ಹಂತಹಂತವಾಗಿ ಸಹಜ ಸ್ಥಿತಿಗೆ ಮರಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !