ಹೊಸದಿಗಂತ ವರದಿ,ಕುಶಾಲನಗರ:
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ವಿದ್ಯಾರ್ಥಿಯನ್ನು ಬೆಂಗಳೂರಿನಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ವಸತಿ ಶಾಲೆಯ 10ನೇ ತರಗತಿ ಮೋನಿಸ್ ಮಂಗಳವಾರ ಬೆಳಗ್ಗೆ ಶಾಲೆಯಿಂದ ಹೊರಗೆ ಹೋದವನು ನಾಪತ್ತೆಯಾಗಿದ್ದ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈತ ಬೆಂಗಳೂರಿನ ಚಂದ್ರು ಲೇಔಟ್ ಠಾಣೆಯ ವ್ಯಾಪ್ತಿಯಲ್ಲಿ ಪತ್ತೆ ಯಾಗಿದ್ದಾನೆ.
ಈತ ಮಂಗಳವಾರ ಬೆಳಗ್ಗೆ ಶಾಲೆಯಿಂದ ಹೊರಗೆ ಹೋದವನು ನಂತರ ವೀರಾಜಪೇಟೆ ಸಮೀಪದ ಬಿಟ್ಟಂಗಾಲ ಗ್ರಾಮದ ನೆಂಟರ ಮನೆಗೆ ತಲುಪಿದ್ದಾನೆ. ಆದರೆ ಅವರ ಮನೆಯ ಬಾಗಿಲಿಗೆ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಅಲ್ಲಿಂದ ಮೈಸೂರಿಗೆ ತೆರಳಿದ ಆತ ನಂತರ ಕಾರು ಮೂಲಕ ಬೆಂಗಳೂರಿಗೆ ಹೋಗಿದ್ದಾಗಿ ಹೇಳಲಾಗಿದೆ.
ಈ ವಿದ್ಯಾರ್ಥಿ ಬೆಂಗಳೂರಿನ ಚಂದ್ರ ಲೇಔಟ್ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿನ ಠಾಣಾಧಿಕಾರಿಯವರು ವಿಚಾರಣೆ ನಡೆಸಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ನಂತರ ವಿದ್ಯಾರ್ಥಿಯ ತಂದೆ ಮತ್ತು ಶಾಲೆಯ ವಾರ್ಡನ್ ಬೆಂಗಳೂರಿಗೆ ತೆರಳಿ ಅಲ್ಲಿಂದ ಕರೆತಂದಿದ್ದಾರೆ.
ವಿದ್ಯಾರ್ಥಿಯಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ವಿದ್ಯಾರ್ಥಿಯ ಪೋಷಕರಿಗೆ ಒಪ್ಪಿಸಲಾಗಿದೆ. ಈತ ಬಸವನಹಳ್ಳಿ ಗ್ರಾಮದವನಾಗಿದ್ದಾನೆ.