ಹೊಸದಿಗಂತ ಡಿಜಿಟಲ್ ಡೆಸ್ಕ್:
10ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕನಿಗೆ ವಿಜಯವಾಡದ ಪೋಕ್ಸೊ ನ್ಯಾಯಾಲಯ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಿ ಮಂಗಳವಾರ ಮಹತ್ವದ ತೀರ್ಪು ಪ್ರಕಟಿಸಿತು. ಅಪರಾಧಿಗೆ 20 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಪೊಲೀಸರು ಮತ್ತು ನ್ಯಾಯಾಲಯದ ದಾಖಲಾತಿಗಳ ಪ್ರಕಾರ, ಜೋಜಿನಗರದ ಭವಾನಿಪುರಂ ನಿವಾಸಿ ಪುಲ್ಲೆಟಿಕುರ್ತಿ ಭುವನಚಂದ್ರ(31) ಶಿಕ್ಷೆಗೊಳಗಾದ ತೆಲುಗು ಶಿಕ್ಷಕ. ಈತ ಸೂರ್ಯರಾವ್‌ಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
2018ರ ಜುಲೈ 23 ರಂದು ಈ ಘಟನೆ ನಡೆದಿತ್ತು. ವಿದ್ಯಾರ್ಥಿನಿ ವಿಶೇಷ ತರಗತಿಯಲ್ಲಿ ಪಾಲ್ಗೊಳ್ಳಲು ಬಂದಿದ್ದಳು. ಈ ಸಂದರ್ಭದಲ್ಲಿ ಶಿಕ್ಷಕ ಆಕೆಯೊಂದಿಗೆ ಅಸಭ್ಯ, ಆಕ್ಷೇಪಾರ್ಹ ರೀತಿಯಲ್ಲಿ ವರ್ತಿಸಿದ್ದಾನೆ. ಇದರಿಂದ ಭಯ, ಆತಂಕಗೊಂಡ ವಿದ್ಯಾರ್ಥಿನಿ, ಶಾಲಾ ಕಟ್ಟಡದ ಮೊದಲ ಮಹಡಿಯಿಂದ ಹಾರಿದ್ದಳು. ಪೊಲೀಸರು ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. 2028ರ ಜುಲೈ 25ರಂದು ಆತನನ್ನು ಬಂಧಿಸಿದ್ದರು.
ಈ ಘಟನೆಗೆ ಸಂಬಂಧಿಸಿದ ಎಲ್ಲ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ ನ್ಯಾಯಾಧೀಶರಾದ ವಿ.ಭವಾನಿ ಶಿಕ್ಷೆ ಪ್ರಕಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಸಂತ್ರಸ್ತೆಗೆ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ದಂಡದ ಮೊತ್ತದಿಂದ ಹೆಚ್ಚುವರಿಯಾಗಿ 10 ಸಾವಿರ ರೂಪಾಯಿಯನ್ನೂ ನೀಡಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿತು.