ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಲಯನ್ಸ್ ಇಂಡಸ್ಟ್ರೀಸ್ ಆರಂಭಿಸಿರುವ ಏಷ್ಯಾದ ಅತಿದೊಡ್ಡ ವನ್ಯಜೀವಿ ರಕ್ಷಣೆ, ಆರೈಕೆ ಮತ್ತು ಪುನರ್ವಸತಿ ಕೇಂದ್ರವಾದ ‘ವಂತರಾ’ತನ್ನ ನೂತನ ಆಡಳಿತ ಮಂಡಳಿಯನ್ನು ಘೋಷಿಸಿದೆ. ಈ ಪ್ರತಿಷ್ಠಿತ ಮಂಡಳಿಗೆ ಕರ್ನಾಟಕದ ನಿವೃತ್ತ ಹಿರಿಯ ಐಎಫ್‌ಎಸ್ ಅಧಿಕಾರಿ ಸುಭಾಷ್ ಕೆ. ಮಲ್ಕೇಡೆ ಸೇರಿದಂತೆ ಐವರು ಜಾಗತಿಕ ವನ್ಯಜೀವಿ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಂಡಳಿಯ ಜವಾಬ್ದಾರಿಗಳು ಮತ್ತು ಕಾರ್ಯಗಳು
ಈ ಮಂಡಳಿಯು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಅನುಸರಣಾ ಕಾರ್ಯಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ವನ್ಯಜೀವಿಗಳನ್ನು ಆಮದು ಮಾಡಿಕೊಳ್ಳುವ ಭವಿಷ್ಯದ ಅರ್ಜಿಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಮತ್ತು ಮುಂದಿನ ಐದು ವರ್ಷಗಳು ಹಾಗೂ ಅದರಾಚೆಗಿನ ವಂತಾರಾದ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.
ಯಾರು ಈ ಸುಭಾಷ್ ಕೆ. ಮಲ್ಕೇಡೆ
ಭಾರತೀಯ ಅರಣ್ಯ ಸೇವೆಯ ನಿವೃತ್ತ ಹಿರಿಯ ಅಧಿಕಾರಿಯಾದ ಸುಭಾಷ್ ಕೆ. ಮಲ್ಕೇಡೆ ಅವರು ಕರ್ನಾಟಕದ ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಆಗಿ ಸೇವೆ ಸಲ್ಲಿಸಿದವರು. ವನ್ಯಜೀವಿ ಸಂರಕ್ಷಣೆ, ಸಂರಕ್ಷಿತ ಅರಣ್ಯ ಪ್ರದೇಶಗಳ ನಿರ್ವಹಣೆ, ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣ ಮತ್ತು ಅರಣ್ಯ ಕಾನೂನು ಜಾರಿಯಲ್ಲಿ ಇವರು ದಶಕಗಳ ಅಪಾರ ಅನುಭವ ಹೊಂದಿದ್ದಾರೆ. ಇತರ ಸದಸ್ಯರಾಗಿ ನ್ಯಾಯಮೂರ್ತಿ ಕೃಷ್ಣ ಮುರಾರಿ, ಕ್ರೇಗ್ ಹೂವರ್, ಗ್ರೆಟಾ ಎಫ್. ಲೋರಿ, ಡಾ. ಕುಶಾಲ್ ಕನ್ವಾರ್ ಶರ್ಮಾ ನೇಮಕವಾಗಿದ್ದಾರೆ. ಸ್ವತಂತ್ರ ಅಧ್ಯಕ್ಷರಾಗಿ ಜಾನ್ ಇ. ಸ್ಕ್ಯಾನ್‌ಲಾನ್ ಎಒ ನೇಮಕವಾಗಿದ್ದಾರೆ.
ಈ ಬಗ್ಗೆ ಆಡಳಿತ ಮಂಡಳಿಯ ಅಧ್ಯಕ್ಷ ಜಾನ್ ಸ್ಕ್ಯಾನ್‌ಲಾನ್ ಮಾತನಾಡಿ: ವಂತಾರಾದ ಭವಿಷ್ಯದ ಯೋಜನೆಗಳನ್ನು ರೂಪಿಸುವಲ್ಲಿ ಮತ್ತು ಇತ್ತೀಚೆಗೆ ಘೋಷಿಸಲಾದ ಬದಲಾವಣೆಗಳನ್ನು ದೈನಂದಿನ ಕಾರ್ಯಾಚರಣೆಗಳಲ್ಲಿ ಅಳವಡಿಸಿಕೊಳ್ಳುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಇನ್ನು ವಂತಾರಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿವಾನ್ ಕರಾಣಿ ಮಾತನಾಡಿ : ವಂತಾರಾದಲ್ಲಿ ವೈಜ್ಞಾನಿಕವಾಗಿ ವನ್ಯಜೀವಿ ಸಂರಕ್ಷಣೆಯನ್ನು ನಾವು ಮುನ್ನಡೆಸುತ್ತಿದ್ದೇವೆ. ಆದ್ದರಿಂದ ವಂತಾರಾದ ಚಟುವಟಿಕೆಗಳನ್ನು ಉನ್ನತ ದರ್ಜೆಯಲ್ಲಿ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಆಡಳಿತ ಮಂಡಳಿಯ ಸದಸ್ಯರನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಮುಂದುವರೆದು, ಈ ಆಡಳಿತ ಮಂಡಳಿಯು ವಂತಾರಾದ ಉನ್ನತ ಆಡಳಿತ ಮಂಡಳಿಯಾಗಿದೆ. ಇದು ವಂತಾರಾದ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಕಾರ್ಯಗಳು, ಭಾರತೀಯ ಕಾನೂನು, ಸಿಐಟಿಇಎಸ್ ಮತ್ತು ಇತರ ಅಂತಾರಾಷ್ಟ್ರೀಯ ಒಪ್ಪಂದಗಳ ಅನುಸರಣೆಯನ್ನು ಮೇಲ್ವಿಚಾರಣೆ ಮಾಡುವ ಒಟ್ಟು ಜವಾಬ್ದಾರಿಯನ್ನು ಹೊಂದಿದೆ ಎಂದು ತಿಳಿಸಿದರು.



