ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎರಡು ವಾರದಿಂದ ವ್ಯಾಪಕ ಚರ್ಚೆಯಲ್ಲಿರುವ ಜ್ಞಾನವಾಪಿ ಮಸೀದಿಯ ವಿಡಿಯೋ ಸರ್ವೇ ವರದಿಯು ಇಂದು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಮೇ 17 ರಂದೇ ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಸಮಿತಿಯು ವರದಿ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶ ಕೇಳಿದ್ದರಿಂದ ಎರಡು ದಿನಗಳ ಹೆಚ್ಚವರಿ ಕಾಲಾವಕಾಶವನ್ನು ನ್ಯಾಯಾಲಯ ನೀಡಿತ್ತು.
ವರದಿ ಸಲ್ಲಿಸಿರುವುದಾಗಿ ಹೇಳಿದ ಸರ್ವೇಕ್ಷಣಾ ಸಮಿತಿಯ ವಿಶೇಷ ಸಹಾಯಕ ಆಯುಕ್ತ ವಿಶಾಲ್ ಸಿಂಗ್ ಮುಚ್ಚಿದ ಲಕೋಟೆಯೊಂದರಲ್ಲಿ ವೀಡಿಯೋ ಚಿಪ್ ಅನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಎರಡೂ ಕಡೆಯ ಜನರು ಹಾಜರಿದ್ದರು ಎಂದು ಮೂಲಗಳು ವರದಿ ಮಾಡಿವೆ.
ಈ ನಡುವೆ ಪ್ರಕರಣದಲ್ಲಿ ಅರ್ಜಿ ಸಲ್ಲಿಸಿದ್ದ ಹಿಂದೂಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದಾರೆ ಎನ್ನಲಾಗಿದೆ. ವಾದಮಂಡಿಸ ಬೇಕಿದ್ದ ಹೆಚ್ ಎಸ್ ಜೈನ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಅವರು ಹೆಚ್ಚಿನ ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ವರದಿಯಲ್ಲಿ ಹೇಳಿವೆ.