ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಎಂಬ ದ್ವೀಪರಾಷ್ಟ್ರ ಮೊದಲಿನಿಂದಲೂ ಭಾರತ ಮತ್ತು ಚೀನಾ ಇವೆರಡೂ ದೇಶಗಳನ್ನು ತನ್ನ ಆರ್ಥಿಕ ಸ್ಥಿತಿ ಉತ್ತಮಗೊಳಿಸುವುದಕ್ಕೆ ಬಳಸಿಕೊಳ್ಳುತ್ತ ಬಂದಿರುವುದು ವಾಸ್ತವ.
ಆದರೆ, ಶ್ರೀಲಂಕಾ ದಿವಾಳಿ ಎದ್ದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಸಹಾಯ ಮಾಡಿರುವ ಭಾರತದ ಮಾತೊಂದನ್ನು ನಡೆಸಿಕೊಡುವುದಕ್ಕೆ, ಚೀನಾಕ್ಕೆ ಬೇಸರವಾದರೂ ಪರವಾಗಿಲ್ಲ ಎಂಬಂಥ ನಡೆಯೊಂದನ್ನು ಶ್ರೀಲಂಕಾ ಈ ಬಾರಿ ಅನುಸರಿಸಿದೆ.
“ವೈಜ್ಞಾನಿಕ ಶೋಧ”ದ ಹೆಸರಿನಲ್ಲಿ ಚೀನಾದ ನೌಕೆಗಳು, ಜಲಾಂತರ್ಗಾಮಿಗಳು ಶ್ರೀಲಂಕಾದ ತೀರವನ್ನು ಪ್ರವೇಶಿಸಲಿದ್ದವು. ಇದನ್ನು ಭಾರತವು ತನ್ನ ಭದ್ರತೆಗೆ ಸವಾಲೆಂಬಂತೆ ನೋಡಿತ್ತು. ಇದೀಗ, ಫಸ್ಟ್ ಪೋಸ್ಟ್ ಜಾಲತಾಣ ಮಾಡಿರುವ ವರದಿಯ ಪ್ರಕಾರ, ಒಂದು ವರ್ಷದಮಟ್ಟಿಗೆ ಚೀನಾದ ಈ ಚಟುವಟಿಕೆಯನ್ನು ನಿರ್ಬಂಧಿಸುವ ನಿರ್ಣಯವನ್ನು ಶ್ರೀಲಂಕಾ ತೆಗೆದುಕೊಂಡಿದೆ.
2024ರ ಜನವರಿ 5ರಿಂದ ಮೇ ತಿಂಗಳಿನವರೆಗೆ ಶ್ರೀಲಂಕಾದ ವಿಶೇಷ ಆರ್ಥಿಕ ವಲಯಕ್ಕೆ ಸೇರಿದ ಬಂದರಿನಲ್ಲಿ ತನ್ನ ವೈಜ್ಞಾನಿಕ ಶೋಧದ ನೌಕೆಯನ್ನು ತಂಗಿಸುವುದಾಗಿ ಚೀನಾ ಹೇಳಿತ್ತು. ಈ ಬಗ್ಗೆ ಜುಲೈ 2023ರಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯೊಂದರಲ್ಲಿ ಭಾರತವು ಶ್ರೀಲಂಕಾಕ್ಕೆ ತನ್ನ ಆಕ್ಷೇಪಣೆಯನ್ನು ಸಲ್ಲಿಸಿತ್ತು.
ಇದೀಗ, ಕೆಲವು ಮಾಧ್ಯಮಗಳ ವರದಿ ಪ್ರಕಾರ ವರ್ಷದ ಮಟ್ಟಿಗೆ ಭಾರತದ ಈ ಆತಂಕಕ್ಕೆ ನಿರಾಳತೆ ಸಿಕ್ಕಿದೆ.