ದಿಢೀರ್ ಏರಿಕೆಯಾದ ಮೃತ್ಯುಂಜಯ-ನೇತ್ರಾವತಿ ನದಿಗಳ ನೀರಿನ ಮಟ್ಟ: ಜನರಲ್ಲಿ ಆತಂಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್

2019 ರ ಸೆಪ್ಟೆಂಬರ್‌ನಲ್ಲಾದ ಭೀಕರ ಪ್ರವಾಹವನ್ನು ನೆನಪಿಸುವಂತೆ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಪ್ರದೇಶದಲ್ಲಿ‌ ಹರಿಯುವ ನೀರಿನ ಮಟ್ಟ ಧಿಡೀರ್ ಹೆಚ್ಚಾಗಿ ಆತಂಕ‌ಹುಟ್ಡಿಸಿದೆ.

ನದಿಗಳು ಹರಿಯುವ ಪರಿಸರದಲ್ಲಿ ಹೆಚ್ಚಿನ ಮಳೆ ಇಲ್ಲದಿದ್ದರೂ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳ ನೀರು ದಿಢೀರ್ ಏರಿಕೆಯಾದ ವಿದ್ಯಮಾನ ಸಂಜೆ ನಡೆದಿದೆ. ಇದರಿಂದ ನದಿಬದಿಗಳಲ್ಲಿ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿಯಾಯಿತು.

ದಿಡುಪೆ,ಮಲವಂತಿಗೆ, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ,ಕಲ್ಮಂಜ ಮೊದಲಾದ ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ಸಂಜೆ 4 ಗಂಟೆ ಬಳಿಕ ನದಿಗಳ ನೀರಿನಲ್ಲಿ ವಿಪರೀತ ಏರಿಕೆ ಕಂಡು ಬಂತು.

ಚಾರ್ಮಾಡಿ ಕಡೆಯಿಂದ ಹರಿಯುವ ಮೃತ್ಯುಂಜಯ ನದಿಯಲ್ಲಿ ಅತ್ಯಧಿಕ ನೀರು ಹರಿದು ಬಂದಿದೆ. ಈ ವರ್ಷ ನದಿ ಅನೇಕ ಬಾರಿ ತುಂಬಿ ಹರಿದಿದ್ದರೂ ಇಷ್ಟೊಂದು ಪ್ರಮಾಣದ ನೀರು ಏರಿಕೆಯಾಗಿರಲಿಲ್ಲ. ಮೃತ್ಯುಂಜಯ ನದಿಯ ಉಗಮ ಸ್ಥಳವಾದ ಬಿದಿರುತಳ, ಚಾರ್ಮಾಡಿ ಮತ್ತು ಘಾಟಿ ಪ್ರದೇಶದಲ್ಲಿ ಸಂಜೆ 3 ಗಂಟೆ ಬಳಿಕ ಸುಮಾರು ಮೂರು ತಾಸು ಕಾಲ ನಿರಂತರ ಸುರಿದ ವಿಪರೀತ ಮಳೆ ಇದಕ್ಕೆ ಕಾರಣವಾಯಿತು. ನದಿ ಬದಿ ಇರುವ ಅನೇಕ ಅಡಕೆ ತೋಟ,ಗದ್ದೆ, ಕಿರು ಸೇತುವೆ,ಕಿಂಡಿ ಅಣೆಕಟ್ಟುಗಳು ಜಲಾವೃತವಾದವು.

ದಿಡುಪ ಕಡೆಯಿಂದ ಹರಿಯುವ ನೇತ್ರಾವತಿ ನದಿಯ ಸಂಪರ್ಕ ಹಳ್ಳಗಳಾದ ಕುಕ್ಕಾವಿನ ಏಳೂವರೆ ಹಳ್ಳ ಹಾಗೂ ಕೂಡಬೆಟ್ಟು ಹಳ್ಳಗಳು ಉಕ್ಕಿಹರಿದ ಪರಿಣಾಮ ನೇತ್ರಾವತಿ ನದಿಯ ತಗ್ಗು ಪ್ರದೇಶಗಳಾದ ಕಡಿರುದ್ಯಾವರ,ಕಾನರ್ಪ,ಪರಮುಖ, ನಿಡಿಗಲ್, ಕಾಯರ್ತೋಡಿ ಕುಡೆಂಚಿ ಹಾಗೂ ಮೃತ್ಯುಂಜಯ ಮತ್ತು ನೇತ್ರಾವತಿ ಸಂಗಮ ಸ್ಥಳವಾದ ಪಜಿರಡ್ಕ ಹಾಗೂ ಕೆಳಭಾಗದ ಪರಿಸರಗಳಲ್ಲಿ ನದಿ ನೀರು ಏರಿಕೆ ಕಂಡಿತು. ಈ ಪ್ರದೇಶಗಳ ಅನೇಕರ ಅಡಕೆ ತೋಟಗಳಿಗೆ ನೀರು ನುಗ್ಗಿದೆ.ದಿಡುಪೆ,ಕೊಲ್ಲಿ ಭಾಗದಲ್ಲಿ ನದಿ ಶಾಂತವಾಗಿದ್ದ ಕಾರಣದಿಂದ ಭಾರಿ ಪ್ರವಾಹದ ಸ್ಥಿತಿ ಉಂಟಾಗಿಲ್ಲ. ಏಳೂವರೆ ಹಳ್ಳ ಹಾಗೂ ಕೂಡ ಬಟ್ಟು ಹಳ್ಳಗಳಿಗೆ ಚಾರ್ಮಾಡಿ ಭಾಗದ ಸಂಪರ್ಕ ಇರುವ ಕಾರಣ ನೀರು ಏರಿಕೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!