October 9, 2026
Friday, October 9, 2026
spot_img

ಹಾಸ್ಟೆಲ್ ಊಟ ತಿಂದ ಮಕ್ಕಳಿಗೆ ದಿಢೀರ್ ವಾಂತಿ, ಹೊಟ್ಟೆನೋವು: 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ದುರಂತವೊಂದು ಸಂಭವಿಸಿದ್ದು, 25ಕ್ಕೂ ಅಧಿಕ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ವಸತಿಶಾಲೆಯಲ್ಲಿ ರಾತ್ರಿ ಊಟ ಸೇವಿಸಿದ ಕೆಲವೇ ಸಮಯದ ಬಳಿಕ ವಿದ್ಯಾರ್ಥಿಗಳಲ್ಲಿ ದಿಢೀರ್ ವಾಂತಿ ಹಾಗೂ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ತುರ್ತು ಚಿಕಿತ್ಸೆ, ಮಕ್ಕಳ ಆರೋಗ್ಯ ಸ್ಥಿರ

ರಾತ್ರಿ ವೇಳೆ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆ ಎಚ್ಚೆತ್ತ ಶಾಲಾ ಸಿಬ್ಬಂದಿ, ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ವೈದ್ಯರ ತುರ್ತು ಚಿಕಿತ್ಸೆಯ ನಂತರ ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸ್ಥಳಕ್ಕೆ ಶಾಸಕರ ಭೇಟಿ, ಅಧಿಕಾರಿಗಳಿಗೆ ತರಾಟೆ

ಘಟನೆಯ ವಿಷಯ ತಿಳಿಯುತ್ತಿದ್ದಂತೆ ತಡಮಾಡದೆ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಹೆಚ್.ಟಿ. ಮಂಜು ಅವರು ಆಸ್ಪತ್ರೆ ಹಾಗೂ ವಸತಿಶಾಲೆಗೆ ಖುದ್ದಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಮಕ್ಕಳ ಪೋಷಕರಿಗೆ ಧೈರ್ಯ ತುಂಬಿದ ಶಾಸಕರು, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಚಿಕಿತ್ಸೆ ಹಾಗೂ ಪೌಷ್ಟಿಕ ಆಹಾರ ಪೂರೈಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದನ್ನೂ ಓದಿ:

ಸಮಗ್ರ ತನಿಖೆಗೆ ಆದೇಶ

ವಸತಿ ಶಾಲೆಗಳಲ್ಲಿ ಮಕ್ಕಳ ಆಹಾರದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಆಹಾರ ವಿಷಯುಕ್ತವಾಗಲು ಕಾರಣವೇನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ವಸತಿಶಾಲೆಯ ಆಡಳಿತ ಮಂಡಳಿಗೆ ಆದೇಶ ನೀಡಿದ್ದಾರೆ. ಅಲ್ಲದೆ, ಈ ಘಟನೆಗೆ ಕಾರಣರಾದವರ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Must Read