October 9, 2026
Friday, October 9, 2026
spot_img

ಹವಾಮಾನ ವೈಪರೀತ್ಯದ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ಭೀತಿ: ರಾಜ್ಯಾದ್ಯಂತ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದಲ್ಲಿ ಸದ್ಯ ಮಳೆ ಕಣ್ಣಮುಚ್ಚಾಲೆ ಆಡುತ್ತಿದ್ದು, ಒಂದೆಡೆ ಮಳೆಯ ಹನಿಗಳು ಬೀಳುತ್ತಿದ್ದರೆ, ಮತ್ತೊಂದೆಡೆ ಬಿಸಿಲಿನ ಬೇಗೆ ಜನರನ್ನು ಸುಡುತ್ತಿದೆ. ಹವಾಮಾನದ ಈ ದಿಢೀರ್ ಏರುಪೇರು ಸಾರ್ವಜನಿಕರನ್ನು ಕಂಗೆಡಿಸಿದ್ದು, ಆರೋಗ್ಯ ಇಲಾಖೆಗೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಜಾಗತಿಕವಾಗಿ ಕಾಡುತ್ತಿರುವ ‘ಸೂಪರ್ ಎಲ್ ನಿನೊ’ ಪ್ರಭಾವದಿಂದಾಗಿ ತಾಪಮಾನ ಏರುತ್ತಿದ್ದು, ಇದರ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಕೂಡ ಎದುರಾಗಿರುವುದರಿಂದ ಸರ್ಕಾರ ಹೈ ಅಲರ್ಟ್ ಘೋಷಿಸಿದೆ.

ಜನರ ಆರೋಗ್ಯದ ಮೇಲೆ ಪರಿಣಾಮ

ಬೆಳಗ್ಗೆ ಚಳಿ, ಮಧ್ಯಾಹ್ನ ಬಿಸಿಲು, ಸಂಜೆ ಮಳೆ ಬರುವ ಈ ವಿಚಿತ್ರ ವಾತಾವರಣದಿಂದಾಗಿ ಜನರ ದೇಹಸ್ಥಿತಿ ಏರುಪೇರಾಗುತ್ತಿದೆ. ದಿಢೀರ್ ಬಿಸಿಲಿನಿಂದಾಗಿ ಮೈಯಲ್ಲಿ ನೀರಿನ ಅಂಶ ಕಡಿಮೆಯಾಗುವುದು, ಸುಸ್ತು ಹಾಗೂ ತಲೆನೋವಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನು ಹವಾಮಾನ ಬದಲಾಗುತ್ತಿದ್ದಂತೆ ಎಲ್ಲಡೆ ವೈರಲ್ ಜ್ವರ, ನೆಗಡಿ ಮತ್ತು ಕೆಮ್ಮು ಶುರುವಾಗಿದ್ದು, ಈ ಲಕ್ಷಣಗಳು ಮಕ್ಕಳು ಹಾಗೂ ಹಿರಿಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಡೆಂಗ್ಯೂ, ಮಲೇರಿಯಾ ಭೀತಿ

ಇನ್ನೊಂದು ಕಡೆ, ಅಲ್ಲಲ್ಲಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಹಾಗೂ ಖಾಲಿ ಜಾಗಗಳಲ್ಲಿ ನೀರು ನಿಂತು ಸೊಳ್ಳೆಗಳ ಕಾಟ ವಿಪರೀತವಾಗಿದೆ. ಇದರಿಂದಾಗಿ ಡೆಂಗ್ಯೂ, ಚಿಕೂನ್‌ಗುನ್ಯಾ ಮತ್ತು ಮಲೇರಿಯಾದಂತಹ ಜ್ವರಗಳು ಹರಡುವ ಆತಂಕ ದುಪ್ಪಟ್ಟಾಗಿದೆ.

ಆರೋಗ್ಯ ಇಲಾಖೆಯ ಸಿದ್ಧತೆ

ಯಾವುದೇ ಬಿಕ್ಕಟ್ಟು ಎದುರಾದರೂ ನಿಭಾಯಿಸಲು ರಾಜ್ಯಾದ್ಯಂತ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರದ ಮಾತ್ರೆಗಳು, ಒಆರ್‌ಎಸ್ ಪ್ಯಾಕೆಟ್‌ಗಳು ಮತ್ತು ರಕ್ತ ಪರೀಕ್ಷೆಯ ಸೌಲಭ್ಯಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಆದೇಶಿಸಲಾಗಿದೆ. ಹಿರಿಯ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಗಿದ್ದು, ಗ್ರಾಮೀಣ ಹಾಗೂ ತಳಮಟ್ಟದಲ್ಲಿ ರೋಗಗಳ ಹರಡುವಿಕೆ ಬಗ್ಗೆ ತೀವ್ರ ನಿಗಾ ಇಡಲು ಸೂಚಿಸಲಾಗಿದೆ.

ಇದನ್ನೂ ಓದಿ:

ಮುನ್ನೆಚ್ಚರಿಕಾ ಕ್ರಮಗಳು

ದಿನದಲ್ಲಿ ಹೆಚ್ಚು ನೀರು ಕುಡಿಯುವುದು, ಕಡ್ಡಾಯವಾಗಿ ನೀರನ್ನು ಕುದಿಸಿ ಆರಿಸಿ ಬಳಸುವುದು ಹಾಗೂ ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸೊಳ್ಳೆಗಳ ಉತ್ಪತ್ತಿಗೆ ಬ್ರೇಕ್ ಹಾಕಲು ಇಲಾಖೆ ಮನವಿ ಮಾಡಿದೆ. ಬದಲಾಗುತ್ತಿರುವ ಈ ದಿನಗಳಲ್ಲಿ ಸಣ್ಣ ಜ್ವರ ಬಂದರೂ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಕಾಣುವುದು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯವಾಗಿದೆ.

Must Read