ಹೊಸದಿಗಂತ ವರದಿ ಚಿತ್ರದುರ್ಗ:
ಸಚಿವ ಡಿ.ಸುಧಾಕರ್ ಅವರ ನಿಧನಕ್ಕೆ ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಧಾಕರ್ ಅವರು ಎಲ್ಲ ಸಮುದಾಯದವರ ಪ್ರೀತಿ ಗಳಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಡಿ.ಸುಧಾಕರ್ ಅಜಾತ ಶತೃವಾಗಿ ಜನಮಾನಸದಲ್ಲಿ ನೆಲೆಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆಯಲ್ಲಿ ಜಾತಿ, ಮತ, ಬೇಧವಿಲ್ಲದೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ:
೨೦೦೮ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ, ಪಕ್ಷೇತರರಾಗಿ ಗೆದ್ದಿದ್ದ ಸುಧಾಕರ್ ಅವರು ತಮ್ಮ ರಾಜಕೀಯ ಮಿತ್ರ ಡಿ.ಕೆ.ಶಿವಕುಮಾರ್ ಅವರ ಅನುಮತಿ ಪಡೆದೇ ಬಿಜೆಪಿಗೆ ಬೆಂಬಲ ನೀಡಿದ್ದರು. ತಾವು ನಂಬಿದವರಿಗೆ ಅವರು ಎಂದಿಗೂ ದ್ರೋಹ ಬಗೆದವರಲ್ಲ. ಒಬ್ಬ ಅತ್ಯುತ್ತಮ ಸಂಘಟನಾಕಾರ ಮತ್ತು ಮೇರು ವ್ಯಕ್ತಿತ್ವದ ರಾಜಕಾರಣಿ ಜಿಲ್ಲೆ ಕಳೆದುಕೊಂಡಿದೆ ಎಂದು ಕಂಬನಿ ಮಿಡಿದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕು. ವಾಣಿವಿಲಾಸ ಸಾಗರ ಅಣೆಕಟ್ಟನ್ನು ತುಂಬಿಸಬೇಕು ಎನ್ನುವುದು ಸಚಿವ ಡಿ.ಸುಧಾಕರ್ ಆಸೆಯಾಗಿತ್ತು. ಸದಾ ಬಡವರ ಪರ, ಅಭಿವೃದ್ಧಿ ಪರ ಚಿಂತನೆ ಮಾಡುತ್ತಿದ್ದ ಧೀಮಂತ ನಾಯಕನನ್ನು ಕಳೆದುಕೊಂಡಂತಾಗಿದೆ. ಅವರ ಅಗಲಿಕೆ ಇಡೀ ಜಿಲ್ಲೆಗೆ ತುಂಬಲಾರದ ನಷ್ಟವಾದಂತಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ತಿಳಿಸಿದ್ದಾರೆ.



