August 31, 2026
Monday, August 31, 2026
spot_img

ಆನ್‌ಲೈನ್‌ ಗೇಮ್ಸ್‌ ಹುಚ್ಚು: ಚಿನ್ನದ ಆಸೆಗೆ ವೃದ್ಧೆಯನ್ನು ಕೊಂದು ಮೃತದೇಹವನ್ನು ಕೆರೆಗೆ ಎಸೆದ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆನ್‌ಲೈನ್‌ ಗೇಮ್‌ ವ್ಯಸನ ಮತ್ತು ಸಾಲದ ಹೊರೆಯಿಂದ ಬಳಲುತ್ತಿದ್ದ ಯುವಕನೊಬ್ಬ ಚಿನ್ನದ ಆಸೆಗೆ ವೃದ್ಧೆಯನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಾಲ ಮಾಡಿ ಬೇಸತ್ತಿದ್ದ ಯುವಕ ಗಗನ್‌ ಆರ್‌.ನ್ನು ಕುಂಬಳಗೋಡು ಪೊಲೀಸರು ಬಂಧಿಸಿದ್ದಾರೆ. ಚಳ್ಳಗಟ್ಟದ ಯಲ್ಲಪ್ಪ ಲೇಔಟ್‌ನಲ್ಲಿ ನೆಲೆಸಿದ್ದ ಗಗನ್‌ ಮನೆಗೆ ನೆರೆಹೊರೆಯವರಾದ ವೃದ್ಧೆಯನ್ನು ಕೊಲೆ ಮಾಡಿದ್ದಾನೆ. ಒಮ್ಮೆ ವೃದ್ಧೆ ಜಯಮ್ಮ ಸಂಬಂಧಿಕರಿಗೆ ಕರೆ ಮಾಡಲು ಗಗನ್‌ ಮನೆಗೆ ಬಂದಿದ್ದರು. ಈ ವೇಳೆ ಅವರು ಧರಿಸಿದ್ದ ಚಿನ್ನದ ಸರ, ಉಂಗುರ ಹಾಗೂ ಕಿವಿಯೋಲೆ ಮೇಲೆ ಕಣ್ಣಿಟ್ಟಿದ್ದ. ಯಾರೂ ಇಲ್ಲದ ವೇಳೆ ಜಯಮ್ಮನ ಉಸಿರುಗಟ್ಟಿಸಿ ಕೊಂದು ಬಂಗಾರವನ್ನು ದೋಚಿದ್ದ.

ಮೃತದೇಹವನ್ನು ಕೆಂಪು ಬಣ್ಣದ ಸೂಟ್‌ಕೇಸ್‌ನಲ್ಲಿ ಹಾಕಿ ಬೈಕ್‌ನಲ್ಲಿ ಸಾಗಿಸಿದ್ದ. ರಾಮೋಹಳ್ಳಿ ತಿಮ್ಮಪ್ಪ ಕೆರೆಗೆ ಮೃತದೇಹವನ್ನು ಎಸೆದು ಹೋಗಿದ್ದ. ನಂತರ ಜಯಮ್ಮನ ಸಂಬಂಧಿಕರು ಮಿಸ್ಸಿಂಗ್‌ ಕಂಪ್ಲೆಟ್‌ ದಾಖಲಿಸಿದ್ದರು. ಇತ್ತ ಕೆರೆಯಲ್ಲಿ ಕೆಲ ದಿನಗಳ ನಂತರ ಸೂಟ್‌ಕೇಸ್‌ ತೇಲಿಬಂದಿದೆ. ಪೊಲೀಸರು ಪರೀಕ್ಷಿಸಿದಾಗ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕುಂಬಳಗೋಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !