ಹೊಸದಿಗಂತ ಕಾರವಾರ:
ಮಂಗಳೂರಿನಲ್ಲಿ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ, ಆರೋಪಿಗಳನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆ, ಅವರ ಮೇಲೆ ಹಲ್ಲೆಯಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರದ ಬಗ್ಗೆ, ಕಾನೂನಿನ ಬಗ್ಗೆ ಜನತೆಗೆ ಭಯವೇ ಇಲ್ಲವಾಗಿದೆ. ಸರ್ಕಾರದ ಅತಿಯಾದ ಓಲೈಕೆ ರಾಜಕಾರಣದ ಪರಿಣಾಮವಾಗಿ ಕಾನೂನನ್ನು ಕೈಗೆತ್ತಿಕೊಂಡು ಇಂತಹ ಅಮಾನುಷ ಕೃತ್ಯಕ್ಕೆ ಇಳಿಯುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ ಎನ್ನುವುದು ಹಲವಾರು ಘಟನೆಗಳಿಂದ ಸಾಬೀತಾಗಿದೆ. ಹಿಂದು ಕಾರ್ಯಕರ್ತರು, ಜನಸಾಮಾನ್ಯರು, ಮಹಿಳೆಯರ ಜೀವಕ್ಕೆ ಭದ್ರತೆ, ಸುರಕ್ಷತೆ ಒದಗಿಸಬೇಕಾಗಿದೆ.
ಸಮಾಜಘಾತುಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ, ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಇಂತಹ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸುಹಾಸ ಶೆಟ್ಟಿ ಹಂತಕರು, ಅವರಿಗೆ ಸಹಕರಿಸಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.