ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುನಿಲ್ ಗವಾಸ್ಕರ್ ಐಪಿಎಲ್ ಪಂದ್ಯಗಳು ನಿಗದಿತ ಸಮಯ ಮೀರಿ ಸಾಗುತ್ತಿರುವ ಬೆಳವಣಿಗೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಂದ್ಯಾವಳಿಯ ವೇಗ ಮತ್ತು ಶಿಸ್ತನ್ನು ಕಾಪಾಡಲು BCCIಗೆ ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಆಟಗಾರರು ಹಾಗೂ ತಂಡಗಳಿಗೆ ನೀಡಿರುವ ಸೌಲಭ್ಯಗಳನ್ನು ಅತಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಗವಾಸ್ಕರ್, ತಂತ್ರಗಾರಿಕೆಯ ವಿರಾಮದ ವೇಳೆ ಮೈದಾನಕ್ಕೆ ಅನಗತ್ಯವಾಗಿ ಹೆಚ್ಚು ಸಿಬ್ಬಂದಿ ಪ್ರವೇಶಿಸುವುದಕ್ಕೆ ಮಿತಿ ಇರಬೇಕು ಎಂದಿದ್ದಾರೆ. ಪಾನೀಯ ನೀಡಲು ಇಬ್ಬರು ಆಟಗಾರರು ಮತ್ತು ಅಗತ್ಯವಿರುವಷ್ಟು ತರಬೇತುದಾರರಿಗೆ ಮಾತ್ರ ಅವಕಾಶ ನೀಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:
ಇದರ ಜೊತೆಗೆ, ಬ್ಯಾಟರ್ ಔಟಾದ ಬಳಿಕ ಹೊಸ ಆಟಗಾರ ಕ್ರೀಸ್‌ಗೆ ಬರಲು ನೀಡುವ ಎರಡು ನಿಮಿಷಗಳ ಸಮಯವನ್ನು ಒಂದು ನಿಮಿಷಕ್ಕೆ ಇಳಿಸಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ಇದರಿಂದ ಪಂದ್ಯದ ವೇಗ ಹೆಚ್ಚಲಿದೆ ಎಂಬುದು ಅವರ ಅಭಿಪ್ರಾಯ.
ಸ್ಲೋ ಓವರ್‌ರೇಟ್‌ಗೆ ಹಣದ ದಂಡಕ್ಕಿಂತ ಪೆನಾಲ್ಟಿ ರನ್ ಅಥವಾ ಅಂಕಪಟ್ಟಿಯಲ್ಲಿ ಅಂಕ ಕಡಿತದಂತಹ ಶಿಕ್ಷೆ ನೀಡಿದರೆ ತಂಡಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸುತ್ತವೆ ಎಂದು ಗವಾಸ್ಕರ್ ಹೇಳಿದ್ದಾರೆ. ಮೈದಾನದ ಪವಿತ್ರತೆ ಕಾಪಾಡುವ ನಿಟ್ಟಿನಲ್ಲಿ ಅನಗತ್ಯ ಓಡಾಟಕ್ಕೂ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚಿನ ಕೆಲವು ಪಂದ್ಯಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ಸಾಗಿರುವುದು ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿತ್ತು. ಹೀಗಾಗಿ ಗವಾಸ್ಕರ್ ನೀಡಿರುವ ಸಲಹೆಗಳ ಬಗ್ಗೆ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.



