ಜಿಲ್ಲಾ ಮಟ್ಟದ ಕಡತ ಯಜ್ಞಕ್ಕೆ ಮುಂದಾದ ಸಚಿವ ಸುನೀಲ್ ಕುಮಾರ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಚಿವರಿಗೆ ತವರು ಜಿಲ್ಲೆ ಉಸ್ತುವಾರಿ ಕೊಟ್ಟಿಲ್ಲ ಎಂಬ ವಿವಾದ ಇನ್ನೂ ಬಿಸಿಯಾಗಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ವಿನೂತನ ಕ್ರಮಕ್ಕೆ ಮುಂದಾಗಿದ್ದಾರೆ. ಫೆ. 19ರಿಂದ ಮಂಗಳೂರಿನಲ್ಲಿ ಬೃಹತ್ ಕಡತ ವಿಲೇವಾರಿ ಅಭಿಯಾನಕ್ಕೆ ಅವರು ಚಾಲನೆ ನೀಡಲಿದ್ದಾರೆ.

ಫೆ. 19ರಿಂದ 28ರ ವರೆಗೆ ಮಂಗಳೂರಿನಲ್ಲಿ ಕಡತ ವಿಲೇವಾರಿ ಅಭಿಯಾನ ಹಾಗೂ ಕಂದಾಯ ಮೇಳ ನಡೆಯಲಿದ್ದು, ಉದ್ಘಾಟನೆಗೆ ಕಂದಾಯ ಸಚಿವ ಆರ್. ಅಶೋಕ ಅವರನ್ನು ಆಹ್ವಾನಿಸಲಾಗಿದೆ. ಈ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸುವುದಕ್ಕೆ ಸುನೀಲ್ ಕುಮಾರ್ ಮುಂದಾಗಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಕಡತ ವಿಲೇವಾರಿಯಲ್ಲಿ ಭಾಗಿಯಾಗಲಿದ್ದು, ಸಾರ್ವಜನಿಕ ಅಹವಾಲುಗಳನ್ನು ಖುದ್ದು ಸಚಿವರೇ ಆಲಿಸಲಿದ್ದಾರೆ. ಪಿಂಚಣಿ, ಅಭಿವೃದ್ಧಿ ಯೋಜನೆಗಳು, ನೀತಿ ನಿರೂಪಣೆಗೆ ಸಂಬಂಧಪಟ್ಟ ವಿಚಾರಗಳನ್ನು ಈ ಅಭಿಯಾನದ ಸಂದರ್ಭದಲ್ಲಿ ಇತ್ಯರ್ಥಪಡಿಸಲು ಉದ್ದೇಶಿಸಲಾಗಿದೆ.

ಹೆಚ್ಚುವರಿ ಕೆಲಸ :
ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ವ್ಯಾಪ್ತಿಯ ಎಲ್ಲ ನೌಕರರು ಹಾಗೂ ಅಧಿಕಾರಿಗಳಿಗೆ ಅಭಿಯಾನದ ಅವಧಿಯಲ್ಲಿ ಒಂದು ತಾಸು ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಒಂದು ವಾರ ಕಾಲ ಯಾವುದೇ ಕಾರಣಕ್ಕೂ ರಜೆ ಹಾಕಬಾರದು ಎಂದು ಸೂಚನೆ ನೀಡಲಾಗಿದ್ದು, ಕಡತ ವಿಲೇವಾರಿಯನ್ನು ಯಶಸ್ವಿಯಾಗಿ ನಡೆಸಿ ಆಡಳಿತ ಯಂತ್ರಕ್ಕೆ ಚುರುಕು ನೀಡಲು ತಯಾರಿ ನಡೆಸಲಾಗಿದೆ.

ಈ ಅಭಿಯಾನದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಶಾಸಕರಿಗೂ ಮಾಹಿತಿ ನೀಡಲಾಗಿದೆ. ಪ್ರತಿ ತಾಲೂಕಿನಲ್ಲಿ ಸರಾಸರಿ ಎರಡುವರೆ ಸಾವಿರ ಕಡತಗಳು ವಿಲೇವಾರಿಗೆ ಬಾಕಿ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆ, ಮನವಿ ಸ್ವೀಕಾರಕ್ಕೆ ಮಾತ್ರ ಸೀಮಿತವಾಗಿರುವಾಗ, ಸುನೀಲ್ ಕುಮಾರ್ ಅವರ ಈ ಉಪಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!