ಮಹಿಳೆಯರ ಜೀವನದಲ್ಲಿ ನಲವತ್ತರ ಹರೆಯ ಅತ್ಯಂತ ನಿರ್ಣಾಯಕ ಘಟ್ಟ. ಈ ವಯಸ್ಸಿನಲ್ಲಿ ದೇಹದಲ್ಲಿ ಹಾರ್ಮೋನ್‌ಗಳ ಬದಲಾವಣೆ ಆರಂಭವಾಗುತ್ತದೆ. ಇದರ ನೇರ ಪರಿಣಾಮ ಮೂಳೆಗಳ ಮೇಲಾಗುತ್ತದೆ. ಮೂಳೆಗಳ ಸಾಂದ್ರತೆ ಕಡಿಮೆಯಾಗಿ, ಮೂಳೆ ಸವೆತ ಮತ್ತು ‘ಆಸ್ಟಿಯೋಪೊರೋಸಿಸ್’ ನಂತಹ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಸಣ್ಣ ಪೆಟ್ಟಾದರೂ ಮೂಳೆ ಮುರಿಯುವ ಸಾಧ್ಯತೆ ಇರುತ್ತದೆ.
ಮೂಳೆಗಳ ಬಲಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಕ್ಯಾಲ್ಸಿಯಂ ಎಂದ ತಕ್ಷಣ ನಮಗೆ ನೆನಪಾಗುವುದು ಹಾಲು. ಆದರೆ, ಹಾಲನ್ನು ಇಷ್ಟಪಡದ ಅಥವಾ ಲ್ಯಾಕ್ಟೋಸ್ ಇಂಟಾಲರೆನ್ಸ್ ಇರುವ ಮಹಿಳೆಯರಿಗೆ ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ನೀಡುವ ಅದ್ಭುತ ಸಸ್ಯಾಹಾರಗಳು ನಮ್ಮ ಸುತ್ತಮುತ್ತಲೇ ಇವೆ. ಅವುಗಳ ಬಗ್ಗೆ ತಿಳಿಯೋಣ.
ರಾಗಿ – ಕ್ಯಾಲ್ಸಿಯಂನ ರಾಜ
ಸಸ್ಯಾಹಾರಗಳಲ್ಲಿ ರಾಗಿಗಿಂತ ಹೆಚ್ಚು ಕ್ಯಾಲ್ಸಿಯಂ ಇರುವ ಮತ್ತೊಂದು ಧಾನ್ಯವಿಲ್ಲ. 100 ಗ್ರಾಂ ಹಾಲಿನಲ್ಲಿ ಸುಮಾರು 120 ಮಿಲಿಗ್ರಾಂ ಕ್ಯಾಲ್ಸಿಯಂ ಇದ್ದರೆ, 100 ಗ್ರಾಂ ರಾಗಿಯಲ್ಲಿ ಬರೋಬ್ಬರಿ 344 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ದಿನನಿತ್ಯ ರಾಗಿ ಮುದ್ದೆ, ರಾಗಿ ರೊಟ್ಟಿ ಅಥವಾ ರಾಗಿ ಅಂಬಲಿ ಸೇವಿಸುವುದರಿಂದ ಮೂಳೆಗಳು ಕಬ್ಬಿಣದಂತೆ ಗಟ್ಟಿಯಾಗುತ್ತವೆ.
ಬಿಳಿ ಎಳ್ಳು
ಎಳ್ಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕ್ಯಾಲ್ಸಿಯಂನ ಗಣಿಯಾಗಿದೆ. ಕೇವಲ ಒಂದು ಚಮಚ ಬಿಳಿ ಎಳ್ಳಿನಲ್ಲಿ 88 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಅಂದರೆ 100 ಗ್ರಾಂ ಎಳ್ಳಿನಲ್ಲಿ ಸುಮಾರು 975 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ, ಇದು ಹಾಲಿಗಿಂತ ಎಂಟು ಪಟ್ಟು ಹೆಚ್ಚು. ಎಳ್ಳನ್ನು ಚಟ್ನಿ ಪುಡಿ ರೂಪದಲ್ಲಿ ಅಥವಾ ಲಡ್ಡು ಮಾಡಿ ನಿತ್ಯ ಸೇವಿಸಬಹುದು.
ಹಸಿರು ಎಲೆ ತರಕಾರಿಗಳು
ಹಸಿರು ಸೊಪ್ಪುಗಳು, ಅದರಲ್ಲೂ ಹರಿವೆ ಸೊಪ್ಪು ಮತ್ತು ದಂಟು ಸೊಪ್ಪಿನಲ್ಲಿ ಹಾಲಿನಿಗಿಂತ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಒಂದು ಕಪ್ ಬೇಯಿಸಿದ ಹರಿವೆ ಸೊಪ್ಪಿನಲ್ಲಿ ಸುಮಾರು 235 ಮಿಲಿಗ್ರಾಂ ಕ್ಯಾಲ್ಸಿಯಂ ಸಿಗುತ್ತದೆ. ಇದರೊಂದಿಗೆ ಬ್ರೊಕೊಲಿ ಕೂಡ ಮೂಳೆಯ ಆರೋಗ್ಯಕ್ಕೆ ಅತ್ಯುತ್ತಮ.
ಚಿಯಾ ಬೀಜಗಳು
ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಚಿಯಾ ಬೀಜಗಳು ಕ್ಯಾಲ್ಸಿಯಂನ ಅತ್ಯುತ್ತಮ ಆಕರ. ಕೇವಲ 2ಚಮಚ ಚಿಯಾ ಬೀಜಗಳಲ್ಲಿ ಸುಮಾರು 179 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಜ್ಯೂಸ್ ಅಥವಾ ಸ್ಮೂಥಿಗಳೊಂದಿಗೆ ಸೇವಿಸಬಹುದು. ಇದು ತೂಕ ಇಳಿಸಲೂ ಸಹಕಾರಿ.
ಇದನ್ನೂ ಓದಿ:
ಬಾದಾಮಿ
ಒಣಫಲಗಳಲ್ಲಿ ಬಾದಾಮಿ ಮೂಳೆಗಳಿಗೆ ತುಂಬಾ ಒಳ್ಳೆಯದು. 100 ಗ್ರಾಂ ಬಾದಾಮಿಯಲ್ಲಿ ಸುಮಾರು 260 ಮಿಲಿಗ್ರಾಂ ಕ್ಯಾಲ್ಸಿಯಂ ಇರುತ್ತದೆ. ಪ್ರತಿದಿನ ರಾತ್ರಿ 4-5 ಬಾದಾಮಿಯನ್ನು ನೆನೆಸಿಟ್ಟು, ಬೆಳಿಗ್ಗೆ ಸಿಪ್ಪೆ ಸುಲಿದು ತಿನ್ನುವುದರಿಂದ ಕ್ಯಾಲ್ಸಿಯಂ ಜೊತೆಗೆ ಮೂಳೆಗೆ ಅಗತ್ಯವಿರುವ ಮೆಗ್ನೀಸಿಯಂ ಮತ್ತು ವಿಟಮಿನ್ ಇ ಕೂಡ ಲಭ್ಯವಾಗುತ್ತದೆ.



