ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ: ಗೌರವ್ ಭಾಟಿಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:  

ಬೆಂಗಳೂರು: ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕನಸು ಕಂಡು ಅದನ್ನು ನನಸು ಮಾಡುವ ಸಾಮಥ್ರ್ಯ ಡಬಲ್ ಎಂಜಿನ್ ಸರಕಾರಕ್ಕೆ ಇದೆ. ಆದ್ದರಿಂದ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರವನ್ನು ಜನತೆ ಚುನಾಯಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಅವರು ತಿಳಿಸಿದರು.
ಮಂಗಳೂರು ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮತ್ತು ಕನ್ನಡಿಗರಿಗೆ ಸಂಬಂಧಿಸಿ ದೂರದೃಷ್ಟಿಯ ಚಿಂತನೆ ಮತ್ತು ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ನರೇಂದ್ರ ಮೋದಿಜಿ ಅವರು ಹೊಂದಿದ್ದಾರೆ ಎಂದು ತಿಳಿಸಿದರು. ದೇಶದ ಅಭಿವೃದ್ಧಿಗೆ ರಾಜ್ಯದ ಕೊಡುಗೆ ದೊಡ್ಡದು ಎಂದ ಅವರು, ಡಬಲ್ ಎಂಜಿನ್ ಸರಕಾರವು ನಮ್ಮದಾದರೆ ಟ್ರಬಲ್ ಎಂಜಿನ್ ಸರಕಾರ ಕಾಂಗ್ರೆಸ್ ಪಕ್ಷದ್ದು ಎಂದು ಟೀಕಿಸಿದರು.
ನರೇಂದ್ರ ಮೋದಿಜಿ ಅವರು ದೂರದೃಷ್ಟಿಯ ನಾಯಕರಾಗಿದ್ದು, ವಿಶ್ವನಾಯಕರಾಗಿ ಹೊರಹೊಮ್ಮಿದ್ದಾರೆ. ಮೋದಿಜಿ ಅವರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ದೂರದೃಷ್ಟಿಯ ಯೋಜನೆಗಳನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮರ್ಥವಾಗಿ ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ವಿರೋಧ ಪಕ್ಷದ ರಾಜ್ಯ ಸರಕಾರ ಇರುವ ಕಡೆಗಳಲ್ಲಿ ಕೇಂದ್ರದ ಯೋಜನೆಗಳಿಗೆ ಸರಿಯಾದ ಸಹಕಾರ ಸಿಗುತ್ತಿಲ್ಲ. ಚಿಲ್ಲರೆ ರಾಜಕಾರಣದಿಂದ ಅಭಿವೃದ್ಧಿಗೆ ಧಕ್ಕೆ ಆಗುತ್ತಿದೆ ಎಂದು ಅವರು ವಿಶ್ಲೇಷಿಸಿದರು. ಆದರೆ, ನಮ್ಮದೇ ಬಿಜೆಪಿ ಸರಕಾರ ರಾಜ್ಯದಲ್ಲೂ ಇದ್ದಾಗ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಮಂತ್ರದ ಜೊತೆ ಅಭಿವೃದ್ಧಿ ಆಶಯ ಸಮರ್ಪಕವಾಗಿ ಜಾರಿಯಾಗುತ್ತದೆ. ಅದನ್ನೇ ಡಬಲ್ ಎಂಜಿನ್ ಸರಕಾರ ಎಂದು ಕರೆಯುವುದಾಗಿ ವಿವರಿಸಿದರು.
ಸಿ ಫಾರ್ ಕಾಂಗ್ರೆಸ್ ಮಾತ್ರವಲ್ಲ; ಸಿ ಫಾರ್ ಕನ್‍ಫ್ಯೂಶನ್ ಕೂಡ ಆಗುತ್ತದೆ. ಸಿ ಎಂದರೆ ಕರಪ್ಶನ್ ಎಂದೂ ಆಗುತ್ತದೆ. ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ಜನನಿ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯವು ಮೋದಿಜಿ ಅವರ ಮನಸ್ಸಿಗೆ ಹೆಚ್ಚು ಆಪ್ತವಾದ ರಾಜ್ಯವಾಗಿದೆ. ಅವರು ಕಾಂಗ್ರೆಸ್ ಸರಕಾರ ಇದ್ದಾಗ ಆಗುತ್ತಿದ್ದಂತೆ ಕೇವಲ ಸುಳ್ಳು ಆಶ್ವಾಸನೆ ನೀಡಲು ರಾಜ್ಯಕ್ಕೆ ಬಂದದ್ದಲ್ಲ. ಜನಹಿತದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಹಲವು ಯೋಜನೆಗಳ ಶಿಲಾನ್ಯಾಸಕ್ಕಾಗಿ ಮೋದಿಜಿ 8 ಬಾರಿ ಇಲ್ಲಿಗೆ ಬಂದಿದ್ದಾರೆ. ಅವರು ನುಡಿದಂತೆ ನಡೆದು ಯೋಜನೆಗಳ ಲೋಕಾರ್ಪಣೆಯನ್ನೂ ಮಾಡಿದ್ದನ್ನು ಜನತೆ ಅರಿತಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರಹಿತ ಮತ್ತು ಪ್ರಾದೇಶಿಕ ಹಿತವನ್ನು ಆದ್ಯತೆಯಿಂದ ನಾವು ನೋಡುತ್ತೇವೆ. ಸ್ವಹಿತಕ್ಕೆ ಕನಿಷ್ಠ ಸ್ಥಾನವನ್ನು ಬಿಜೆಪಿ ನೀಡುತ್ತದೆ. ಡಬಲ್ ಎಂಜಿನ್ ಸರಕಾರದಡಿ ರೈತರಿಗೆ 6 ಸಾವಿರ ರೂಪಾಯಿಯನ್ನು ಕೇಂದ್ರ ಮತ್ತು 4 ಸಾವಿರವನ್ನು ರಾಜ್ಯದ ಬಿಜೆಪಿ ಸರಕಾರ ನೀಡುತ್ತಿದೆ. ತುಷ್ಟೀಕರಣ ನೀತಿ ನಮ್ಮದಲ್ಲ. ಎಲ್ಲರ ಸಶಕ್ತೀಕರಣ ನೀತಿ ನಮ್ಮದು ಎಂದು ವಿವರಿಸಿದರು.
ಸ್ವಚ್ಛ ಭಾರತ ಯೋಜನೆಯಡಿ ರಾಜ್ಯದಲ್ಲಿ 48 ಲಕ್ಷ ಶೌಚಾಲಯ ನಿರ್ಮಿಸಿ ಮಹಿಳೆಯರ ಘನತೆಯನ್ನು ಹೆಚ್ಚಿಸಿದ್ದೇವೆ. 75 ವರ್ಷಗಳ ಸ್ವಾತಂತ್ರ್ಯದ ಬಳಿಕವೂ ಮನೆಗಳಿಗೆ ಕುಡಿಯುವ ನೀರನ್ನು ನೀಡಿರಲಿಲ್ಲ. ಜಲಜೀವನ್ ಮಿಷನ್ ಯೋಜನೆಯಡಿ ಸ್ವಚ್ಛ ಕುಡಿಯುವ ನೀರನ್ನು 1 ಕೋಟಿಗೂ ಹೆಚ್ಚು ಮನೆಗಳಿಗೆ ಕೊಡಲಾಗಿದೆ ಎಂದು ತಿಳಿಸಿದರು. 7 ಲಕ್ಷ ಮನೆಗಳ ನಿರ್ಮಾಣಕ್ಕೆ ಕ್ರಮ, 32 ಲಕ್ಷ ಸಿಲಿಂಡರ್ ಸಂಪರ್ಕ, ಆಯುಷ್ಮಾನ್ ಭಾರತ್ ಯೋಜನೆಯಡಿ 15 ಲಕ್ಷ ಜನರಿಗೆ ಚಿಕಿತ್ಸೆ- ಇವೆಲ್ಲವೂ ನಮ್ಮ ಸಾಧನೆಗಳು ಎಂದು ತಿಳಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಋಣಾತ್ಮಕ ಚಿಂತನೆ ಮತ್ತು ಟೀಕೆಗಳನ್ನು ಅವರು ಖಂಡಿಸಿದರು. ರಾಷ್ಟ್ರೀಯ ಭದ್ರತೆ, ಜನರ ಹಿತಾಸಕ್ತಿಗೆ ನಾವು ಆದ್ಯತೆ ನೀಡಿದ್ದೇವೆ. ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷವು ಪಿಎಫ್‍ಐ, ಎಸ್‍ಡಿಪಿಐ ಜೊತೆ ಸಂಪರ್ಕ ಹೊಂದಿತ್ತು. ಅದು ಗೆದ್ದಲು ಹುಳದಂತೆ ಎಂದ ಅವರು, ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಂಡ ಸಿದ್ದರಾಮಯ್ಯರವರು ಪಿಎಫ್‍ಐ, ಎಸ್‍ಡಿಪಿಐ ನಾಯಕರ ಹಾಗೂ ಕಾರ್ಯಕರ್ತರÀ ಮೇಲಿನ 1700 ಕೇಸುಗಳನ್ನು ರದ್ದುಪಡಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, 6 ಬೇರೆ ಬೇರೆ ಭಾಗಗಳಲ್ಲಿ ವಿಭಾಗ ಮಾಧ್ಯಮ ಕೇಂದ್ರವನ್ನು ಆರಂಭಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡು ಈ ವಿಭಾಗ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ್ ಎಂ, ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಜಿಲ್ಲಾ ಮುಖ್ಯ ವಕ್ತಾರ ರವಿಶಂಕರ್ ಮಿಜಾರ್ ಅವರು ಉದ್ಘಾಟನೆ ಮತ್ತು ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!