ಹೊಸದಿಗಂತ ವರದಿ,ಕಲಬುರಗಿ:
ರಾಜ್ಯದ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರಕಾರದ ನಿಲುವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳ ಸೆ.29 ಕ್ಕೆ ನಡೆಯಲಿರುವ ಕರ್ನಾಟಕ ಬಂದ್ ಗೆ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಾವೇರಿ ವಿಚಾರದಲ್ಲಿ ನ್ಯಾಯಾಧೀಕರಣ ಮತ್ತು ಸುಪ್ರೀಂ ಕೋರ್ಟ ನೀಡಿರುವ ತೀರ್ಪು ಕಾವೇರಿ ಕಣಿವೆಯ ರೈತರ ನೀರಿನ ಹಕ್ಕನ್ನೇ ಕಸಿದುಕೊಂಡಿದೆ.ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಮುಖ್ಯ ಕಾರಣ. ತಮಿಳುನಾಡು ಸರ್ಕಾರ ತನ್ನ ರೈತರ ನೀರಿನ ಹಕ್ಕನ್ನು ರಕ್ಷಿಸಲು ತೋರಿಸುವ ಕಾಳಜಿ ಮತ್ತು ಸಿದ್ದತೆಗಳನ್ನು ನಮ್ಮ ರಾಜ್ಯ ಸರ್ಕಾರ ಮಾಡುತ್ತಿಲ್ಲ ಎಂದರು.
ಸಂಕಷ್ಟ ಪರಿಸ್ಥಿತಿಯಲ್ಲಿ ನೀರು ಹಂಚಿಕೆಗೆ ಪ್ರತೇಕ ಸೂತ್ರವನ್ನು ನ್ಯಾಯಾಧೀಕರಣ ರಚಿಸಬೇಕಾಗಿದೆ.ಕಾವೇರಿ ಜಲ ವಿವಾದ ಭುಗಿಲೆದ್ದಾಗ ಮಾತ್ರ ಒಂದೆಷ್ಟು ತಲೆ ಕಡಿಸಿಕೊಳ್ಳುವ ರಾಜ್ಯ ಸರಕಾರ ಆನಂತರ ಯಾವುದೇ ಕಾನೂನು ಹೋರಾಟ ನಡೆಸದೆ ಮೌನವಾಗುತ್ತಿದೆ.ಇದರ ಪರಿಣಾಮ ನಮ್ಮ ರೈತರ ಮೇಲಾಗುತ್ತಿದೆ.ರಾಜ್ಯದಲ್ಲಿ ಮುಂಗಾರು ಮಳೆ ಆರಂಭ ಕೂಡಲೇ ಅಣೆಕಟ್ಟಿಯಲ್ಲಿ ನೀರು ಸಂಗ್ರಹಿಸುವುದಕ್ಕೆ ಮೊದಲ ಆದ್ಯತೆ ನೀಡುವ ಬದಲು ನದಿಯಲ್ಲಿ ಬಂದ ನೀರನ್ನು ಕಾಲುವೆಗಳ ಮೂಲಕ ಕೆರೆ-ಕಟ್ಟೆಗಳನ್ನು ತುಂಬಿಸಲು ಮೊದಲ ಆದ್ಯತೆ ನೀಡಬೇಕು ಎಂದರು.
ಕಾವೇರಿ ನೀರಿಗಾಗಿ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ.ಸೆ.29 ರ ಕರ್ನಾಟಕ ಬಂದಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.