ಹೊಸದಿಗಂತ ಡಿಜಿಟಲ್ ಡೆಸ್ಕ್:
“ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡುವುದರಿಂದ ಮಾನವ ಹಕ್ಕುಗಳಿಗೆ ತೊಂದರೆಯಾಗುವುದಿಲ್ಲ. ಮಾನವ ಹಕ್ಕುಗಳ ರಕ್ಷಣೆಗೆ ಭಯೋತ್ಪಾದನೆಯೇ ದೊಡ್ಡ ಸವಾಲಾಗಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐ ಎ) 13 ನೇ ಸಂಸ್ಥಾಪಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು “ಸುಸಂಸ್ಕೃತ ಸಮಾಜಕ್ಕೆ ಭಯೋತ್ಪಾದನೆ ದೊಡ್ಡ ಶಾಪ. ಭಯೋತ್ಪಾದನೆಯಿಂದ ಭಾರತವು ಅತಿ ಹೆಚ್ಚು ತೊಂದರೆ ಅನುಭವಿಸಿದೆ. ಭಯೋತ್ಪಾದನೆಯನ್ನು ಬುಡ ಸಹಿತ ಕಿತ್ತೊಗೆಯುವ ಅವಶ್ಯಕತೆಯಿದೆ. ಆದರೆ ವಿಪರ್ಯಾಸವೆಂಬಂತೆ ಭಯೋತ್ಪಾದನೆಯ ವಿರುದ್ಧ ಕಾರ್ಯಾಚರಣೆ ನಡೆಸಿದಾಗೆಲ್ಲ ಕೆಲವು ಮಾನವ ಹಕ್ಕುಗಳ ಸಂಸ್ಥೆಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಗೋಳಿಡುತ್ತವೆ. ಇಂಥಹ ಸಂಸ್ಥೆಗಳೊಂದಿಗೆ ನನಗೆ ಭಿನ್ನಾಭಿಪ್ರಾಯವಿದೆ. ಭಯೋತ್ಪಾದನೆಯನ್ನು ಹತ್ತಿಕ್ಕುವುದರಿಂದ ಮಾನವ ಹಕ್ಕುಗಳಿಗೆ ಚ್ಯುತಿಯಾಗುವುದಿಲ್ಲ” ಎಂದು ಹೇಳಿದ್ದಾರೆ.
ಮೋದಿ ಸರ್ಕಾರವು ಭಯೋತ್ಪಾದನೆಯ ವಿರುದ್ಧ ʼಶೂನ್ಯ ಸಹಿಷ್ಣುತೆʼ ನೀತಿಯನ್ನುಹೊಂದಿದೆ. ಯಾವುದೇ ಕಾರಣಕ್ಕೂ ಭಯೋತ್ಪಾದನೆಯಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದಿರುವ ಅವರು “ದೇಶದ ಆಂತರಿಕ ಸುರಕ್ಷತೆಯನ್ನುಕಾಪಾಡಲು ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಅತೀಅಗತ್ಯ. 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಬೇಕೆಂದರೆ ಆಂತರಿಕವಾಗಿ ದೇಶ ಸುರಕ್ಷಿತವಾಗಿರಬೇಕಾಗುತ್ತದೆ. ಹಾಗಾಗಿ ದೇಶದ ಆಂತರಿಕ ಸುರಕ್ಷತೆಗೆ ಧಕ್ಕೆಯುಂಟು ಮಾಡುವ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವ ಅವಶ್ಯಕತೆಯಿದೆ” ಎಂದು ಹೇಳಿದ್ದಾರೆ.