ಹೊಸದಿಗಂತ ಡಿಜಿಟಲ್ ಡೆಸ್ಕ್:
ಐದು ವರ್ಷದಿಂದ ನಿಲುಗಡೆ ಆಗಿರುವ ಜೆಟ್ ಏರ್ವೇಸ್ ನ ಎಲ್ಲಾ ಆಸ್ತಿಗಳನ್ನು ಮಾರುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಜಲನ್ ಕಲ್ರಾಕ್ ಕನ್ಸಾರ್ಟಿಯಂಗೆ (ಜೆಕೆಸಿ) ಮಾಲಕತ್ವ ವರ್ಗಾವಣೆ ಮಾಡುವ ಪ್ರಯತ್ನಕ್ಕೆ ಸರ್ವೋಚ್ಚ ನ್ಯಾಯಾಲಯ ತಡೆ ಹಾಕಿದೆ. ಅಜೊತೆಗೆ ಜೆಟ್ ಏರ್ವೇಸ್ನ ಎಲ್ಲಾ ಆಸ್ತಿಗಳನ್ನು ಮಾರುವಂತೆ ಆದೇಶ ಹೊರಡಿಸಿದೆ. ಈ ಮೂಲಕ ಜೆಟ್ ಏರ್ವೇಸ್ಗೆ ಕೋರ್ಟ್ ಅಂತಿಮ ವಿದಾಯ ಹೇಳಿದೆ.
ನರೇಶ್ ಗೋಯಲ್ ಸ್ಥಾಪಿಸಿದ ಜೆಟ್ ಏರ್ವೇಸ್ ಸಂಸ್ಥೆ ದಿವಾಳಿ ಎದ್ದು 2019ರಲ್ಲಿ ಕಾರ್ಯಾಚರಣೆ ನಿಲ್ಲಿಸಿತ್ತು. ಅದನ್ನು ಖರೀದಿಸಲು ಯುಎಇ ದೇಶದ ಎನ್ಆರ್ಐ ಮುರಾರಿ ಜಲನ್ ಮತ್ತು ಕಲ್ರಾಕ್ ಕ್ಯಾಪಿಟಲ್ ಪಾರ್ಟ್ನರ್ಸ್ನ ಸಮೂಹವಾದ ಜೆಕೆಸಿ ಪ್ರಸ್ತಾಪಿಸಿತ್ತು. ನಿಗದಿತ ಸಮಯದಲ್ಲಿ ನಿಗದಿತ ಹಣ ನೀಡಬೇಕೆಂಬ ಷರತ್ತುಗಳೊಂದಿಗೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು ಜೆಕೆಸಿಗೆ ಅವಕಾಶ ಕೊಟ್ಟಿತು. ಮಾಲಕತ್ವ ವರ್ಗಾವಣೆಗೆ ಅನುಮತಿ ಕೊಟ್ಟಿತು.
ಆದರೆ, ಪ್ಲಾನ್ ಪ್ರಕಾರ ಯಾವುದೂ ನಡೆಯುತ್ತಿಲ್ಲ. ಮಾಲಕತ್ವ ವರ್ಗಾವಣೆ ಆಗಬಾರದು ಎಂದು ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಎಸ್ಬಿಐ ಮುಂತಾದ ಸಾಲಗಾರ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದವು. ಸಾಲಗಾರರ ವಾದವನ್ನು ಒಪ್ಪಿರುವ ಕೋರ್ಟ್, ಜೆಟ್ ಏರ್ವೇಸ್ ಆಸ್ತಿಯನ್ನು ಮಾರಿ ಸಂಬಂಧ ಪಟ್ಟವರಿಗೆ ಹಂಚಲು ಆದೇಶಿಸಿದೆ. ಸಂವಿಧಾನದಲ್ಲಿರುವ ಆರ್ಟಿಕಲ್ 142 ನೀಡುವ ವಿಶೇಷಾಧಿಕಾರ ಬಳಸಿ ಸುಪ್ರೀಂ ನ್ಯಾಯಪೀಠ ಈ ಮಹತ್ವದ ತೀರ್ಮಾನ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರು ಈ ನ್ಯಾಯಪೀಠದಲ್ಲಿದ್ದರು. ಅಕ್ಟೋಬರ್ 16ರಂದು ಈ ನ್ಯಾಯಪೀಠ ಎಲ್ಲಾ ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿತ್ತು.
ಜೆಟ್ ಏರ್ವೇಸ್ ಮಾರಾಟದ ನಿರ್ಣಯದಲ್ಲಿ ಏನಿತ್ತು?
ಜೆಟ್ ಏರ್ವೇಸ್ನ ಮಾಲಿಕತ್ವವನ್ನು ಪಡೆಯಲು ಜೆಕೆಸಿ ಸಂಸ್ಥೆಯು ಆರಂಭದಲ್ಲಿ 350 ಕೋಟಿ ರೂ ನೀಡುವುದೂ ಸೇರಿದಂತೆ ಒಟ್ಟಾರೆ 4,783 ಕೋಟಿ ರೂ ಹಣ ಪಾವತಿಸಬೇಕೆಂದು ನಿರ್ಣಯ ಮಾಡಲಾಗಿತ್ತು. ಆದರೆ, ಆರಂಭಿಕ ಪಾವತಿಯಾದ 350 ಕೋಟಿ ರೂ ಅನ್ನು ಜೆಕೆಸಿ ನೀಡದೇ ಇದ್ದರೂ ಮಾಲಕತ್ವ ವರ್ಗಾವಣೆಗೆ ಜೆಕೆಸಿ ಅನುಮತಿ ನೀಡಿತ್ತು. ಎಸ್ಬಿಐ ಮೊದಲಾದ ಸಾಲಗಾರರ ಗುಂಪು ಈ ನಿರ್ಧಾರವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿದ್ದವು.
ಈಗ ಜೆಟ್ ಏರ್ವೇಸ್ನ ಎಲ್ಲಾ ಆಸ್ತಿಯನ್ನೂ ಮಾರಿ, ಸಾಲಗಾರರು ಸೇರಿದಂತೆ ಯಾರ್ಯಾರಿಗೆ ಸಲ್ಲಬೇಕೋ ಅವರಿಗೆ ಹಣ ಹಂಚಲಾಗುತ್ತದೆ.
ಇದೇ ವೇಳೆ, ಜೆಟ್ ಏರ್ವೇಸ್ನ ಸಂಸ್ಥಾಪಕ ನರೇಶ್ ಗೋಯಲ್ ಅವರು ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತು ಸಂಕಷ್ಟದಲ್ಲಿದ್ದಾರೆ. ಜೈಲಿನಲ್ಲಿದ್ದ ಅವರು ಸದ್ಯ ಬೇಲ್ ಪಡೆದು ತಾತ್ಕಾಲಿಕವಾಗಿ ಹೊರಗಿದ್ದಾರೆ.