ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾರಣಾಸಿಯ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಜುಲೈ 26ರ ಸಂಜೆ 5ರವರೆಗೆ ತಡೆಯಾಜ್ಞೆ ನೀಡಿದೆ. ವಾರಣಾಸಿ ಜಿಲ್ಲಾ ನ್ಯಾಯಾಲಯ ಎರಡು ದಿನಗಳ ಹಿಂದೆ ಮಸೀದಿ ಆವರಣದಲ್ಲಿ ಸರ್ವೆ ನಡೆಸಲು ಅನುಮತಿ ನೀಡಿ ಕೊಟ್ಟಿದ್ದ ಆದೇಶಕ್ಕೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಜುಲೈ 26ಕ್ಕೆ ಅಲಹಾಬಾದ್ ಹೈಕೋರ್ಟ್ ಮುಸ್ಲಿಂ ಪಕ್ಷದ ಮನವಿ ಆಲಿಸಲಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ನಡುವೆ ಸೋಮವಾರ ಅಪರಾಹ್ನ 2 ಗಂಟೆಗೂ ಈ ಬಗ್ಗೆ ಸುಪ್ರೀಂಕೋರ್ಟ್ ಇನ್ನೊಮ್ಮೆ ವಿಚಾರಣೆ ನಡೆಸಲಿದೆ.
ವಾರಣಾಸಿ ನ್ಯಾಯಾಲಯದ ಆದೇಶದಂತೆ ಸೋಮವಾರ ಬೆಳ್ಳಂ ಬೆಳಗ್ಗೆಯೇ ಜ್ಞಾನವಾಪಿ ಮಸೀದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡ ಆಗಮಿಸಿ ಸಮೀಕ್ಷೆಯ ಪ್ರಕ್ರಿಯೆ ಆರಂಭಿಸಿತ್ತು. ಈ ನಡುವೆ ವಾರಣಾಸಿ ನ್ಯಾಯಾಲಯದ ಆದೇಶಗಳನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮಸೀದಿ ಸಮಿತಿಯು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪೀಠವು ಸಮೀಕ್ಷೆಗೆ ಎರಡು ದಿನಗಳ ಕಾಲ ತಡೆ ನೀಡಿದೆ. ಈ ಕಾಲಾವಕಾಶದಲ್ಲಿ ಅಲಹಾಬಾದ್ ಹೈಕೋರ್ಟ್, ಜಿಲ್ಲಾ ನ್ಯಾಯಾಲಯದ ನಿರ್ದೇಶನವನ್ನು ಪರಿಶೀಲಿಸಬೇಕಿದೆ.
ಇದೇ ವೇಳೆ ಕೇಂದ್ರದ ಪರವಾಗಿ ವಾದ ಮಾಡಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಸಮೀಕ್ಷೆಯು ವಾರಣಾಸಿಯ ಜ್ಞಾನವಾಪಿ ಮಸೀದಿ ನಿರ್ಮಾಣಕ್ಕೆ ಯಾವುದೇ ರೀತಿ ಧಕ್ಕೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲಿನ ಒಂದು ಇಟ್ಟಿಗೆಯನ್ನೂ ತೆಗೆಯುವುದಿಲ್ಲ ಅಂತಹ ಯಾವುದೇ ಯೋಜನೆಯೂ ಇಲ್ಲ. ಅರ್ಜಿದಾರರು ಆತಂಕಪಡುವ ಅಗತ್ಯವಿಲ್ಲ ಎಂದರು. ಆವರಣದ ಸುತ್ತಳತೆ ಮತ್ತು ಛಾಯಾಗ್ರಹಣವನ್ನು ಮಾತ್ರ ಮಾಡಲಾಗುತ್ತದೆ ಎಂದು ಪ್ರತಿಪಾದಿಸಿದರು.
ವಾದ ಆಲಿಸಿದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಎಎಸ್‌ಐ ಉತ್ಖನನ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ತೋರುತ್ತಿದೆ, ಮುಂದಿನ ಸೋಮವಾರದವರೆಗೆ ಅಂದರೆ ಒಂದು ವಾರದವರೆಗೆ ಯಾವುದೇ ಉತ್ಖನನ ರೀತಿಯ ಚಟುವಟಿಕೆಗಳು ನಡೆಯದೇ ಇರುವುದನ್ನು ಖಾತ್ರಿಪಡಿಸುವುದಕ್ಕೆ ನಿರ್ದೇಶಿಸಿದ್ದಾರೆ.
ಕಳೆದ ವಾರ ವಾರಣಾಸಿ ಜಿಲ್ಲಾ ನ್ಯಾಯಾಲಯವು ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದು ಪಕ್ಷವು ಪ್ರತಿಪಾದಿಸುತ್ತಿರುವ ವಝುಖಾನವನ್ನು ಹೊರತುಪಡಿಸಿ ಜ್ಞಾನವಾಪಿ ಮಸೀದಿಯ ಸಂಪೂರ್ಣ ಆವರಣವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವೈಜ್ಞಾನಿಕ ಸಮೀಕ್ಷೆ ನಡೆಸಬಹುದೆಂದು ಆದೇಶಿಸಿತ್ತು.