ರಾಜ್ಯಪಾಲರ ಕುರಿತು ಸುಪ್ರೀಂ ಕೋರ್ಟ್ ತೀರ್ಪು, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಪಾಠ: ಸಿಎಂ ಸಿದ್ದರಾಮಯ್ಯ

 ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ಅವರು ಏಕಪಕ್ಷೀಯವಾಗಿ ಕೈಗೊಂಡಿರುವ ತೀರ್ಮಾನಗಳನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ದೇಶದ ಎಲ್ಲ ರಾಜ್ಯಪಾಲರು ಮತ್ತು ತೆರೆಯ ಹಿಂದೆ ಆಟವಾಡುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಪ್ಟ್ರಪತಿಗಳ ಅಂಕಿತ ಪಡೆಯುವ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನಡೆಯಬೇಕು ಎಂದು ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವುದರಿಂದ ಇಲ್ಲಿಯ ವರೆಗಿನ ಗೊಂದಲಗಳು ನಿವಾರಣೆಯಾಗಿದೆ.

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಸಂವಿಧಾನದ ಆಶಯ ಮತ್ತು ಸಾಂವಿಧಾನಿಕ ಹುದ್ದೆಯ ಘನತೆ-ಗೌರವವನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿರುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರತೊಡಗಿವೆ. ಇದರಿಂದಾಗಿ ಗೌರವಾನ್ವಿತ ರಾಜ್ಯಪಾಲರ ಹುದ್ದೆ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ ಎಂದು ಹೇಳಿದ್ದಾರೆ.

ತಮ್ಮ ಪಕ್ಷವನ್ನು ಜನ ತಿರಸ್ಕರಿಸಿದ ರಾಜ್ಯಗಳಲ್ಲಿ ತಮ್ಮ ಆಣತಿಯನ್ನು ಪಾಲಿಸುವ ರಾಜ್ಯಪಾಲರನ್ನು ನೇಮಿಸಿ ಅವರ ಮೂಲಕ ಪರೋಕ್ಷವಾಗಿ ಆಡಳಿತವನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುತ್ತಿರುವ ದ್ರೋಹವಾಗಿದೆ.ಕರ್ನಾಟಕದಲ್ಲಿ ಕೂಡ ವಿಧಾನಮಂಡಲ ಅಂಗೀಕರಿಸಿದ ಕೆಲವು ಮಸೂದೆಗೆಳ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಜ್ಯಪಾಲರು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಹೀಗಿದ್ದರೂ ನಮ್ಮ ಸರ್ಕಾರ ಅನಗತ್ಯವಾಗಿ ಈ ಬೆಳವಣಿಗೆಗೆ ರಾಜಕೀಯ ಬೆರೆಸದೆ ಸಂಯಮದಿಂದ ನಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಅನಗತ್ಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ನ ಈ ತೀರ್ಪು ಶಾಶ್ವತವಾಗಿ ಕೊನೆಗೊಳಿಸಲಿದೆ ಎಂದು ನಂಬಿದ್ದೇನೆ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!