ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಹೆಚ್ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ದ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ದಯವಿಟ್ಟು ಇಂತಹ ವಿಷಯಗಳನ್ನು ನನ್ನ ಬಳಿ ಚರ್ಚೆ ಮಾಡಬೇಡಿ ಎಂದು ಹೇಳಿದ್ದಾರೆ.
ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಸುದ್ದಿಗಾರರು ಸೂರಜ್ ರೇವಣ್ಣ ವಿರುದ್ಧದ ಆರೋಪ ಸಂಬಂಧ ಕೇಳಿದ್ದಕ್ಕೆ ಹೆಚ್ಡಿಕೆ ಗರಂ ಆಗಿದ್ದರೆ.
ರಾಜ್ಯದ ಸಮಸ್ಯೆ ಸಂಬಂಧಪಟ್ಟ ವಿಚಾರಗಳನ್ನು ಚರ್ಚೆ ಮಾಡಿ. ಅದು ಬಿಟ್ಟು ಇಂತಹ ವಿಚಾರಗಳ ಬಗ್ಗೆ ಅವಶ್ಯಕತೆ ಏನಿದೆ?. ಕಾನೂನು ಇದೆ ಕಾನೂನಡಿ ನಡೆಯಲಿದೆ. ಯಾಕೆ ಪ್ರಕರಣ ಬರುತ್ತಿದೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ನನ್ನ ಬಳಿ ಆ ತರಹದ ಪ್ರಶ್ನೆಗಳನ್ನ ಕೇಳಬೇಡಿ ಎಂದರು.
ಇದೇ ವೇಳೆ ಚನ್ನಪಟ್ಟಣದಲ್ಲಿ ಡಿಕೆಶಿ (DK Shivakumar) ಸ್ಪರ್ಧೆ ಊಹಾಪೋಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಬೇಕಾದರೂ ನಿಲ್ಲಲಿ ಡಿಕೆಶಿನಾದರೂ ನಿಲ್ಲಲಿ. ಅವರ ಜೊತೆ ಇನ್ನೂ 4 ಜನ ಕರೆದುಕೊಂಡು ಬಂದು ಬೇಕಾದರೂ ನಿಲ್ಲಿಸಿಕೊಳ್ಳಿ. ನಿಲ್ಲಬಾರದು ಅಂತ ಹೇಳಲು ಆಗುತ್ತಾ? ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ನಿಲ್ಲಬಹುದು. ಅದಕ್ಕೆ ದೊಡ್ಡ ಮಹತ್ವ ಕೊಡೋದು ಬೇಡ. ನಮ್ಮ ಕ್ಯಾಂಡಿಡೇಟ್ ಬಗ್ಗೆ ಕಾಲವೇ ನಿರ್ಧರಿಸಲಿದೆ ಎಂದು ತಿಳಿಸಿದರು.