ಯುಪಿಐ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕ: ಎನ್‌ಸಿಪಿಐ ನೀಡಿದ ಸ್ಪಷ್ಟನೆಯೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆನ್‌ಲೈನ್ ಪಾವತಿ ವ್ಯವಸ್ಥೆ ಯುಪಿಐ ವಹಿವಾಟುಗಳಲ್ಲಿ ಇನ್ನುಮುಂದೆ 2 ಸಾವಿರ ರೂ.ಗಿಂತ ಹೆಚ್ಚಿನ ವರ್ಗಾವಣೆಯ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಈ ಕುರಿತು ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ (NPCI) ಸುತ್ತೋಲೆಯೊಂದನ್ನು ಹೊರಡಿಸಿದ್ದು ಶುಲ್ಕ ವಿಧಿಸುವ ಕುರಿತು ಸ್ಪಷ್ಟನೆ ನೀಡಿದೆ.

ಆನ್‌ಲೈನ್ ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಪಾವತಿ ಇನ್ಸ್ಟ್ರುಮೆಂಟ್ಸ್ (PPI) ಮೂಲಕ ಮಾಡಿದ 2,000 ರೂ.ಗಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳ (Merchant PPI Transaction) ಮೇಲೆ 1.1 ಪ್ರತಿಶತ ಇಂಟರ್‌ಚೇಂಜ್ ಶುಲ್ಕವನ್ನು ವಿಧಿಸಲಾಗುತ್ತದೆ. ಬ್ಯಾಂಕ್‌ ನಿಂದ ಬ್ಯಾಂಕ್‌ಗೆ ಮಾಡಲ್ಪಟ್ಟ ಸಾಮಾನ್ಯ ವರ್ಗಾವಣೆಯ ಮೇಲೆ ಯಾವುದೇ ಶುಲ್ಕಗಳಿರುವುದಿಲ್ಲ ಎಂದು ಎನ್‌ಸಿಪಿಐ ಸ್ಪಷ್ಟನೆ ನೀಡಿದೆ. ಈ ಹೊಸ ನಿಯಮಗಳು ಏಪ್ರಿಲ್‌ 1, 2023ರಿಂದ ಜಾರಿಗೆ ಬರಲಿವೆ.

ಎನ್‌ಪಿಸಿಐ ತನ್ನ ಸುತ್ತೋಲೆಯಲ್ಲಿ ಉಲ್ಲೇಖಿಸಿರುವುದೇನೆಂದರೆ “ಇಂಟರ್‌ಚೇಂಜ್ ಶುಲ್ಕಗಳು ಪಿಪಿಐ ವ್ಯಾಪಾರಿ ವಹಿವಾಟುಗಳಿಗೆ ಮಾತ್ರ ಅನ್ವಯಿಸುತ್ತದೆ. ಗ್ರಾಹಕರಿಗೆ ಯಾವುದೇ ಶುಲ್ಕವಿರುವುದಿಲ್ಲ ಮತ್ತು ಬ್ಯಾಂಕ್ ಖಾತೆಯಿಂದ ಬ್ಯಾಂಕ್ ಖಾತೆ ಆಧಾರಿತ ಯುಪಿಐ ಪಾವತಿಗಳಿಗೆ (ಅಂದರೆ ಸಾಮಾನ್ಯ ಯುಪಿಐ ಪಾವತಿಗಳಿಗೆ) ಯಾವುದೇ ಶುಲ್ಕಗಳಿಲ್ಲ”. ಇದರ ಅರ್ಥ ಸಾಮಾನ್ಯ ವಹಿವಾಟುಗಳು ಎಂದಿನಂತೆ ಉಚಿತವಾಗಿ ನಡೆಯಲಿವೆ. ಹಾಗೆಯೇ ಗ್ರಾಹಕರು ಯುಪಿಐ ಅಪ್ಲಿಕೇಷನ್‌ಗಳಲ್ಲಿ ಬ್ಯಾಂಕ್ ಖಾತೆ, RuPay ಕ್ರೆಡಿಟ್ ಕಾರ್ಡ್ ಮತ್ತು ಪ್ರಿಪೇಯ್ಡ್ ವ್ಯಾಲೆಟ್‌ಗಳ ಮೂಲಕ ಪಾವತಿಸುವ ಆಯ್ಕೆಯನ್ನೂ ಹೊಂದಿರುತ್ತಾರೆ ಎಂದು ಎನ್‌ಸಿಪಿಐ ಉಲ್ಲೇಖಿಸಿದೆ.

ಇದಲ್ಲದೇ ಯುಪಿಐ ಮೂಲಕ ಗ್ರಾಹಕರ ಕೆವೈಸಿ ಮಾಹಿತಿ ಸೋರಿಕೆಯಾಗುತ್ತಿದೆ. ಮೊಬೈಲ್‌ ಹ್ಯಾಕ್‌ ಆಗುವ ಸಂಭವ ಹೆಚ್ಚಿದೆ ಎಂಬೆಲ್ಲ ವದಂತಿಗಳು ಹರಿದಾಡುತ್ತಿದ್ದು ಈ ಕುರಿತೂ ಕೂಡ ಎನ್‌ಸಿಪಿಐ ಸ್ಪಷ್ಟೀಕರಣ ನೀಡಿದ್ದು “ಯುಪಿಐನಿಂದ ಯಾವುದೇ ರೀತಿಯಲ್ಲಿ ಗ್ರಾಹಕರ ಕೆವೈಸಿ (KYC) ಮಾಹಿತಿ ಸೋರಿಕೆಯಾಗುವುದಿಲ್ಲ. ಇದು ಅತ್ಯಂತ ಸುರಕ್ಷಿತ ವಿಧಾನವಾಗಿದೆ. ಮೊಬೈಲ್‌ ಹ್ಯಾಕ್‌ ಆಗುವ ವದಂತಿಗಳಿಗೆ ಗ್ರಾಹಕರು ಕಿವಿಗೊಡಬಾರದು. ಯುಪಿಐ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಪಾವತಿ ವಿಧಾನವಾಗಿ ಮುಂದುವರೆಯುತ್ತದೆ” ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!