ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಮಳೆಗೆ ನಗರ ನರಕ ದರ್ಶನ ತೋರಿಸಿಕೊಟ್ಟಿದೆ. ಪಾಲಿಕೆ, ಜಿಲ್ಲಾಡಳಿತ ಎಷ್ಟು ಅಲರ್ಟ್ ಆಗಿತ್ತು ಎಂಬುದನ್ನು ಆರಂಭದ ಸಾಧಾರಣ ಮಳೆಯೇ ತೋರಿಸಿಕೊಟ್ಟಿದೆ. ಇನ್ನು ಮಳೆಯ ಆರ್ಭಟ ಶುರುವಾದರೆ ಸ್ಥಿತಿ ಹೇಗಿದ್ದೀತು ಎಂದು ನೀವೇ ಊಹಿಸಿ?
ರೋಡ್ ಕಟ್ ಆಗಿ ತಿಂಗಳು ಎರಡಾಯಿತು ಸ್ವಾಮಿ!
ಮಂಗಳೂರು ನಗರದ ಲೇಡಿಹಿಲ್ ಬಳಿ ಮೂರ್‍ನಾಲ್ಕು ಕಡೆ ಕಾಂಕ್ರಿಟ್ ರಸ್ತೆ ಅಗೆದು ಎರಡು ತಿಂಗಳುಗಳೇ ಕಳೆದಿದೆ. ಆದರೆ ಇದುವರೆಗೂ ಅದನ್ನು ಮುಚ್ಚುವ ಕಾರ್ಯ ಆಗಿಲ್ಲ. ಗುಂಡಿ ತೋಡಿದವರು ಮಣ್ಣು ತುಂಬಿಸಿ ಕೈ ತೊಳೆದುಕೊಂಡಿದ್ದಾರೆ! ಈಗ ಮಳೆಯಿಂದಾಗಿ ಗುಂಡಿಗೆ ತುಂಬಿಸಿರುವ ಮಣ್ಣು ರಸ್ತೆ ಪಾಲಾಗುತ್ತಿದ್ದು, ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ. ದ್ವಿಚಕ್ರ ವಾಹನ ಸವಾರರಿಗಂತೂ ಈ ಕೆಸರುಗುಂಡಿ ಕಂಟಕಪ್ರಾಯವಾಗಿದೆ. ಸದ್ಯ ಎರಡು ಬ್ಯಾರಿಕೇಡ್ ಅಡ್ಡವಿಟ್ಟು ಸಂಭಾವ್ಯ ಅಪಘಾತ ತಪ್ಪಿಸಲಾಗಿದೆ. ಮೊದಲ ಮಳೆ ಅಲ್ಲಿನ ಸ್ಥಿತಿಯನ್ನು ಅನಾವರಣಗೊಳಿಸಿದೆ. ಇಲ್ಲಿರುವ ಚಿತ್ರಣ ವಾಸ್ತವವನ್ನು ತೆರೆದಿಡುತ್ತಿದೆ. ಅಪರ ಜಿಲ್ಲಾಧಿಕಾರಿಗಳು ಈ ರಸ್ತೆಯ ಪಕ್ಕದಲ್ಲೇ ವಾಸ್ತವ್ಯವಿದ್ದಾರೆ. ಪಾಲಿಕೆ ಅಧಿಕಾರಿಗಳು ದಿನಾ ಓಡಾಡುವ ರಸ್ತೆಯಿದು…ಆದರೆ ಕಟ್ಟಿಂಗ್‌ಗೊಳಗಾದ ರಸ್ತೆ ಮಾತ್ರ ಇನ್ನು ಕಾಂಕ್ರಿಟ್ ಭಾಗ್ಯ ಕಂಡಿಲ್ಲ.
ರಾತ್ರಿ ಸಂಚಾರ ಡೇಂಜರ್!
ನಗರದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರದಿಂದ ವಾಹನ ಚಲಾಯಿಸುವುದು ಒಳಿತು. ರಸ್ತೆಯಲ್ಲಿನ ಗುಂಡಿಗಳ ಅರಿವಿರದೆ ವಾಹನ ಚಲಾಯಿಸಿದರೆ ಅಪಘಾತಕ್ಕೆಈಡಾಗುವುದು ಖಂಡಿತ. ಮೊದಲೇ ನಗರದ ಬಹುತೇಕ ರಸ್ತೆಗಳು ಪಾರ್ಕಿಂಗ್ ಸ್ಥಳವಾಗಿಬಿಟ್ಟಿವೆ. ಇನ್ನೊಂದೆಡೆ ಹೊಂಡಗುಂಡಿಗಳ ರಸ್ತೆ ಡೇಂಜರ್ ಆಗಿ ಪರಿಣಮಿಸಿದೆ. ರಾತ್ರಿವೇಳೆಯಂತೂ ವಾಹನ ಸವಾರು ಅಲರ್ಟ್ ಆಗಿಯೇ ವಾಹನ ಚಲಾಯಿಸಬೇಕು.
ಆದೇಶಕ್ಕೆ ಕಿಮ್ಮತ್ತಿಲ್ಲವೇ?
ಪಾಲಿಕೆ ಆಯುಕ್ತ ಕೆ.ಚೆನ್ನಬಸಪ್ಪ ಅವರು ವಾರದ ಹಿಂದೆ ‘ಇನ್ನು ರೋಡ್ ಕಟ್ಟಿಂಗ್ ಇಲ್ಲ’ ಎಂದು ಆದೇಶ ಹೊರಡಿಸಿದ್ದರು. ಆದರೆ ಭಾನುವಾರ ಬಿಜೈ ರಸ್ತೆಯುದ್ದಕ್ಕೂ ಬೆಳ್ಳಂಬೆಳಗ್ಗೆಯೇ ರಸ್ತೆ ಅಗೆತ ಆರಂಭವಾಗಿತ್ತು. ಕೆಲವೆಡೆ ಡ್ರೈನೇಜ್ ಕಾರಣದಿಂದ ಅಗೆಯುವ ಕಾರ್ಯ ಮುಂದುವರಿದಿತ್ತು. ಈ ರಸ್ತೆಯ ಸುಮಾರು ೧೦ ಕಡೆಗಳಲ್ಲಿ ರಸ್ತೆ ಅಗೆಯಲಾಗಿದೆ. ಮೊದಲ ಮಳೆಗೇ ಹೀಗಾದರೆ ಮುಂದೆ ಹೇಗೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ನಗರದ ಬೆಂದೂರ್‌ವೆಲ್, ಕಂಕನಾಡಿ, ಫಳ್ನೀರ್ ಸೇರಿದಂತೆ ಹಲವು ಕಡೆಗಳಲ್ಲಿ ಅರೆಬರೆ ಕಾಮಗಾರಿಗಳು ಪ್ರಯಾಣಿಕರಿಗೆ ಸಂಕಷ್ಟ ತಂದಿತ್ತಿವೆ.