ಬೆಂಗಳೂರು ಶಾಲಾ ಮಕ್ಕಳ ಬ್ಯಾಗ್ ತಪಾಸಣೆ ವೇಳೆ ಕಾಂಡೋಮ್, ಸಿಗರೇಟ್, ಗರ್ಭನಿರೋಧಕ ಮಾತ್ರೆ ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ವ್ಯವಸ್ಥಾಪನ ಮಂಡಳಿಯು ತರಗತಿಯೊಳಗೆ ಸೆಲ್ ಫೋನ್ ಬಳಕೆಯನ್ನು ತಡೆಗಟ್ಟಲು ವಿದ್ಯಾರ್ಥಿಗಳ ಬ್ಯಾಗ್‌ ಪರಿಶೀಲಿಸುವಂತೆ ನಗರದ ಶಾಲೆಗಳಿಗೆ ಸೂಚಿಸಿತ್ತು. ಅದರಂತೆ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ ಪರಿಶೀಲನೆ ವೇಳೆ ಸಿಕ್ಕಂತಹ ವಸ್ತುಗಳನ್ನು ನೋಡಿ ಶಿಕ್ಷಕರು ಆಘಾತಕ್ಕೆ ಒಳಗಾಗಿದ್ದಾರೆ.
ತಪಾಸಣೆ ವೇಳೆ 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಸೆಲ್ ಫೋನ್‌, ಕಾಂಡೋಮ್‌, ಗರ್ಭನಿರೋಧಕಗಳು, ಲೈಟರ್‌ಗಳು, ಸಿಗರೇಟ್‌ಗಳು, ವೈಟ್‌ನರ್‌ಗಳು ಮತ್ತು ಹೆಚ್ಚುವರಿ ಹಣವನ್ನು ನೋಡಿ ಅಧಿಕಾರಿಗಳು ದಂಗುಬಡಿದು ಹೋಗಿದ್ದಾರೆ.
ಕೆಲವು ವಿದ್ಯಾರ್ಥೀಗಳು ತರಗತಿಗಳಿಗೆ ಮೊಬೈಲ್‌ ತರುತ್ತಾರೆ ಎಂಬ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸಲು ತೀರ್ಮಾನಿಸಲಾಗಿತ್ತು. ಆದರೆ, ಫಲಿತಾಂಶವು ಅನಿರೀಕ್ಷಿತವಾಗಿದ್ದು, ಅತ್ಯಂತ ಆಘಾತಕಾರಿಯಾದದ್ದಾಗಿದೆ.
ಕೆಲವು ಶಾಲೆಗಳು ತಕ್ಷಣವೇ ಪೋಷಕ- ಶಿಕ್ಷಕರ ವಿಶೇಷ ಸಭೆಗಳನ್ನು ಕರೆದಿವೆ. “ಈ ವಿಚಾರ ಕೇಳಿ ಪೋಷಕರು ಅಷ್ಟೇ ಆಘಾತಕ್ಕೊಳಗಾದರು ಮತ್ತು ಮಕ್ಕಳಲ್ಲಿನ ಹಠಾತ್ ವರ್ತನೆಯ ಬದಲಾವಣೆಗಳ ಬಗ್ಗೆ ನಮಗೆ ಹೇಳಿದರು” ಎಂದು ನಗರದ ಶಾಲೆಯೊಂದರ ಪ್ರಾಂಶುಪಾಲರು ಹೇಳಿದ್ದಾರೆ.
10ನೇ ತರಗತಿಯ ಬಾಲಕಿಯ ಬ್ಯಾಗ್‌ನಲ್ಲಿ ಕಾಂಡೋಮ್ ಪತ್ತೆಯಾಗಿದೆ ಎಂದು ಮತ್ತೊಬ್ಬ ಪ್ರಾಂಶುಪಾಲರು ತಿಳಿಸಿದ್ದಾರೆ. “ಪ್ರಶ್ನೆ ಮಾಡಿದಾಗ, ಅವಳು ತನ್ನ ಸಹಪಾಠಿಗಳು ಹಾಗೂ ತಾನು ಹೋಗುವ ಖಾಸಗಿ ಟ್ಯೂಷನ್‌ನಲ್ಲಿರುವವರ ಮೇಲೆ ಸಬೂಬು ಹೇಳಿದ್ದಾಳೆ.
“ಮತ್ತೊಬ್ಬ ವಿದ್ಯಾರ್ಥಿನಿಯ ಬ್ಯಾಗ್‌ನಲ್ಲಿ ಮೌಖಿಕ ಗರ್ಭನಿರೋಧಕಗಳು (ಐ-ಪಿಲ್) ಇತ್ತು ಮತ್ತು ಹಲವಾರು ವಿದ್ಯಾರ್ಥಿಗಳ ವಾಟರ್ ಬಾಟಲಿಗಳಲ್ಲಿ ಆಲ್ಕೋಹಾಲ್ ಇತ್ತು,” ಬೆಂಗಳೂರಿನ 80 ರಷ್ಟು ಶಾಲೆಗಳಲ್ಲಿ ತಪಾಸಣೆ ನಡೆಸಲಾಗಿದೆ ಎಂದು ಕೆಎಎಂಎಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ತಿಳಿಸಿದ್ದಾರೆ.
“ನಾವು ಈ ಆಘಾತದಿಂದ ಹೊರಬರಲು ಒದ್ದಾಡುತ್ತಿದ್ದೇವೆ. ವಿದ್ಯಾರ್ಥಿಗಳು ಶಿಕ್ಷಕರು ಮತ್ತು ಸಹಪಾಠಿಗಳಿಗೆ ಕಿರುಕುಳ ನೀಡುವುದು, ಅಶ್ಲೀಲ ಭಾಷೆ, ಬೆದರಿಸುವಿಕೆ ಮತ್ತು ಕೆಟ್ಟ ಸನ್ನೆಗಳನ್ನು ಮಾಡುವುದು ಕಂಡುಬಂದಿದೆ. ಅಂತಹ ನಡವಳಿಕೆಯು 5 ನೇ ತರಗತಿಯ ಮಕ್ಕಳಲ್ಲೂ ಕಂಡುಬರುತ್ತದೆ” ಎಂದು ಕುಮಾರ್ ಹೇಳಿದ್ದಾರೆ.
ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಲು ಶಾಲೆಗಳು ಮತ್ತು ಪೋಷಕರಿಗೆ ಸೂಚನೆಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಬದಲು – ಕೌನ್ಸೆಲಿಂಗ್ ನಡೆಸಲು ಶಿಫಾರಸು ಮಾಡಲಾಗಿದೆ. “ನಾವು ಶಾಲೆಗಳಲ್ಲಿ ಕೌನ್ಸೆಲಿಂಗ್ ಅವಧಿಗಳನ್ನು ಹೊಂದಿದ್ದರೂ, ಮಕ್ಕಳಿಗೆ ಹೊರಗಿನಿಂದ  ಸಹಾಯ ಪಡೆಯಲು ಪೋಷಕರನ್ನು ಕೇಳಿದ್ದೇವೆ ಮತ್ತು 10 ದಿನಗಳವರೆಗೆ ಶಾಲೆಗೆ ರಜೆ ನೀಡಿದ್ದೇವೆ” ಎಂದು ಪ್ರಾಂಶುಪಾಲರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!