October 12, 2026
Monday, October 12, 2026
spot_img

ಸಚಿವ ಸ್ಥಾನ ಸಿಕ್ಕ 1 ಗಂಟೆಯಲ್ಲೇ ಆಸ್ಪತ್ರೆಗೆ ಸರ್ಪ್ರೈಸ್ ವಿಸಿಟ್: ನೈಜ ಸ್ಥಿತಿ ಕಂಡು ಯು.ಟಿ.ಖಾದರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸಚಿವ ಸಂಪುಟದಲ್ಲಿ ಆರೋಗ್ಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ತಡರಾತ್ರಿ ಬೆಂಗಳೂರಿನ ಜಯನಗರದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡುವ ಮೂಲಕ ಸಿಬ್ಬಂದಿಗೆ ಬಿಗ್ ಶಾಕ್ ನೀಡಿದ್ದಾರೆ.

ಆಸ್ಪತ್ರೆಯ ರಿಯಾಲಿಟಿ ಚೆಕ್ ನಡೆಸಿದ ಸಚಿವರು

ಆಸ್ಪತ್ರೆಯ ಸ್ವಚ್ಛತೆ, ರೋಗಿಗಳಿಗೆ ಸಿಗುತ್ತಿರುವ ಚಿಕಿತ್ಸೆ ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಲು ಸಚಿವರು ಈ ಸರ್ಪ್ರೈಸ್ ವಿಸಿಟ್ ಹಾಕಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ರಾತ್ರಿ ಪಾಳಯದಲ್ಲಿ ಸಿಬ್ಬಂದಿ ಕೊರತೆ ಇರುವುದು ಎದ್ದುಕಾಣುತ್ತಿತ್ತು. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿ ಇರಬೇಕಾಗಿದ್ದ ಇಬ್ಬರು ವೈದ್ಯರು ಸೇರಿದಂತೆ ಕೆಲವು ಸಿಬ್ಬಂದಿ ಕೆಲಸಕ್ಕೆ ಗೈರಾಗಿರುವುದು ಸಚಿವರ ಗಮನಕ್ಕೆ ಬಂದಿದೆ. ಸಾರ್ವಜನಿಕ ಆಸ್ಪತ್ರೆಯ ಈ ಬೇಜವಾಬ್ದಾರಿತನವನ್ನು ಕಂಡು ಸಚಿವರು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.

ಮಾಧ್ಯಮಗಳೊಂದಿಗೆ ಯು.ಟಿ. ಖಾದರ್ ಮಾತು

ಸರ್ಪ್ರೈಸ್ ವಿಸಿಟ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, “ಆಸ್ಪತ್ರೆಯ ನಿಜವಾದ ಪರಿಸ್ಥಿತಿ ಮತ್ತು ಲೋಪದೋಷಗಳನ್ನು ಪತ್ತೆಹಚ್ಚುವ ಉದ್ದೇಶದಿಂದಲೇ ನಾನು ತಡರಾತ್ರಿ ಭೇಟಿ ನೀಡಿದ್ದೆ. ಹಗಲು ವೇಳೆಯಲ್ಲಿ ಸಭೆ-ಸಮಾರಂಭಗಳಿರುವುದರಿಂದ ಆಸ್ಪತ್ರೆಗಳ ನೈಜ ಚಿತ್ರಣ ಸಿಗುವುದು ಕಷ್ಟ. ಇಂದು ಇಬ್ಬರು ವೈದ್ಯರು ಕರ್ತವ್ಯಕ್ಕೆ ಹಾಜರಾಗಿಲ್ಲ. ಸದ್ಯಕ್ಕೆ ಅವರಿಗೆ ಎಚ್ಚರಿಕೆ ನೀಡಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಲಾಗುವುದು,” ಎಂದು ತಿಳಿಸಿದರು.

“ಸರ್ಕಾರಿ ಆಸ್ಪತ್ರೆಗಳನ್ನು ನಂಬಿ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರೋಗಿಗಳ ಸಂಖ್ಯೆ ಎಷ್ಟೇ ಇದ್ದರೂ ಅವರಿಗೆ ಸೂಕ್ತ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಇದರೊಂದಿಗೆ ವೈದ್ಯರಿಗೂ ಯಾವುದೇ ಭಯವಿಲ್ಲದೆ ಕೆಲಸ ಮಾಡುವಂತಹ ಸುರಕ್ಷಿತ ವಾತಾವರಣವನ್ನು ಸರ್ಕಾರ ನಿರ್ಮಿಸಲಿದೆ” ಎಂದು ಅವರು ಭರವಸೆ ನೀಡಿದರು.

ಖಾಸಗಿ ಆಂಬುಲೆನ್ಸ್ ಹಾವಳಿಗೆ ಬೀಳುತ್ತಾ ಬ್ರೇಕ್?

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳ ದಂಧೆ ಮತ್ತು ಹಾವಳಿ ಹೆಚ್ಚಾಗಿರುವ ದೂರುಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಂದು ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಖಾಸಗಿ ಆಂಬುಲೆನ್ಸ್ ಹಾವಳಿ ತಡೆಗಟ್ಟುವ ಕುರಿತು ಮತ್ತು ಆಸ್ಪತ್ರೆಗಳ ಸುಧಾರಣೆಗೆ ಅಗತ್ಯವಿರುವ ಎಲ್ಲಾ ಸಲಹೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದರು.

Must Read