ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಬೆಟ್ಟಿಯಾ ಎಂಬ ಹಳ್ಳಿಯಲ್ಲಿ ಅಶ್ಚರ್ಯಕಾರಿ ಘಟನೆಯೊಂದು ನಡೆದಿದೆ. ಹಾವು ಕಚ್ಚಿ ಮನುಷ್ಯರು ಉಸಿರು ಚೆಲ್ಲುವುದು ಸಾಮಾನ್ಯ. ಆದರೇ, ಇಲ್ಲಿ ಒಂದು ವರ್ಷದ ಮಗು ವಿಷಪೂರಿತ ನಾಗರಹಾವನ್ನು ಕಚ್ಚಿದೆ. ಇದರಿಂದಾಗಿ ಹಾವು ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನು ಹಾವನ್ನು ಕಚ್ಚಿದ ಕೆಲವು ಗಂಟೆಗಳ ನಂತರ ಮಗು ಕೂಡ ಮೂರ್ಛೆ ಹೋಗಿದೆ.
ಈ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹ್ಚಿ ಬಂಕಟ್ವಾ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಜೌಲಿಯಾ ಪಿಎಚ್‌ಸಿಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ರವಾನಿಸಲಾಗಿತ್ತು.
ಮಾಹಿತಿಯ ಪ್ರಕಾರ, ಸುನಿಲ್ ಸಾ ಅವರ ಒಂದು ವರ್ಷದ ಮಗ ಗೋವಿಂದ ಮನೆಯಲ್ಲಿ ಆಟವಾಡುತ್ತಿದ್ದಾಗ ಎರಡು ಅಡಿ ಉದ್ದದ ನಾಗರಹಾವು ಬಂದಿತ್ತು ಎಂದು ಅಜ್ಜಿ ಮಾಟೇಶ್ವರಿ ದೇವಿ ಹೇಳಿದರು. ಅದನ್ನು ಆಟಿಕೆ ಎಂದು ಭಾವಿಸಿ ಮಗು ಹಾವನ್ನು ಹಿಡಿದುಕೊಂಡು ತನ್ನ ಹಲ್ಲುಗಳಿಂದ ಕಚ್ಚಿದೆ. ಇದಾದ ಕೂಡಲೇ ನಾಗರಹಾವು ಸತ್ತುಹೋಯಿತು. ಇದಾದ ಮೇಲೆ ಮಗು ಕೂಡ ಅಸ್ವಸ್ಥವಾಗಿದೆ. ತಕ್ಷಣವೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಬೆಟ್ಟಯ್ಯದ ಜಿಎಂಸಿಎಚ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ದಿವಾಕಾಂತ್ ಮಿಶ್ರಾ, ಮಗುವಿಗೆ ವಿಷಪ್ರಾಶನದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದರು. ಪ್ರಸ್ತುತ ಚಿಕಿತ್ಸೆ ನಡೆಯುತ್ತಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯ ನಂತರ,ಮಗುವಿನ ಕಡಿತದಿಂದ ಹಾವು ಸಾವನ್ನಪ್ಪಿದ ಬಗ್ಗೆ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.