ಹೊಸದಿಗಂತ ಅಂಕೋಲಾ:
ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆಯ ಕೊನೆಯ ಘಳಿಗೆಯಲ್ಲಿ ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೆ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ? ಇದು ಮನುಷ್ಯರ ಮೂಳೆಯೋ ಅಥವಾ ಯಾವುದೋ ಪ್ರಾಣಿಯ ಮೂಳೆಯೋ? ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.
ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತ ದೇಹಗಳು ಘಟನೆ ಸಂಭವಿಸಿ ಎರಡು ತಿಂಗಳುಗಳು ಕಳೆದರೂ ಪತ್ತೆಯಾಗಿಲ್ಲ ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯಗಳನ್ನು ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದ ಜನರಿದ್ದು ಪ್ರತಿದಿನ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿರುವುದು ಕಂಡು ಬರುತ್ತಿದೆ.
ಇದೀಗ ದೊರಕಿರುವ ಎಲುಬಿನ ತುಂಡು ಕಣ್ಮರೆಯಾದ ಮೂವರಲ್ಲಿ ಯಾರದಾದರೂ ಇರಬಹುದೋ ಎನ್ನುವ ಚಿಂತನೆಗೆ ಕಾರಣವಾಗಿದೆ. ಅದೇ ರೀತಿ ತಮಿಳುನಾಡು ಮೂಲದ ಗ್ಯಾಸ್ ಟ್ಯಾಂಕರ್ ಶರವಣನ್ ಎನ್ನುವವರ ಮೃತ ದೇಹ ಸಹ ಅರ್ಧ ಭಾಗ ಮಾತ್ರ ದೊರಕಿದ್ದು ಈ ಮೂಳೆ ಅವರ ದೇಹದ ಭಾಗವೂ ಆಗಿರಬಹುದು ಇಲ್ಲವೇ ಯಾವುದೇ ಪ್ರಾಣಿಯ ಮೂಳೆಯೂ ಆಗಿರಬಹುದಾಗಿದೆ.
ವೈಜ್ಞಾನಿಕ ಪರೀಕ್ಷೆಯಿಂದ ಈ ಕುರಿತು ನಿಖರವಾದ ಮಾಹಿತಿ ದೊರಕಬೇಕಿದೆ.