ಹೊಸದಿಗಂತ ವರದಿ ಹುಬ್ಬಳ್ಳಿ:
ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಂಗೇದ್ರ ಅವರ ರಾಜೀನಾಮೆಯನ್ನು ಜನಾಕ್ರೋಶಕ್ಕೆ ಮಣಿದು ಪಡೆಯಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಃ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ನಾಗೇಂದ್ರ ಅವರ ವಿರುದ್ಧ ಡೆತ್ ನೋಟ್ ಬರೆದು ಮೃತಪಟ್ಟಿದ್ದು, ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ದೋಷಾರೋಪಪಟ್ಟಿ ಸಲ್ಲಿಸಲು ಮುಂದಾದರೂ ಸಚಿವ ಸ್ಥಾನ ನೀಡಲಾಗಿತ್ತು. ರಾಜ್ಯಪಾಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಗಟ್ಟಿಯಾಗಿ ಹೋರಾಟ ಮಾಡಿ, ಜನಜಾಗೃತಿ ಮೂಡಿಸಿದ್ದರು. ಈಗ ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ನಾಗೇಂದ್ರ ಅವರು ರಾಜೀನಾಮೆ ನೀಡಲು ಮುಂದಾದರೂ ಕಾಂಗ್ರೆಸ್ ನಾಯಕರು ಪಡೆಯಲು ಮೀನಾಮೇಷ ಮಾಡುತ್ತಿದ್ದಾರೆ. ರಾಜೀನಾಮೆ ಅಂಗೀಕರಿಸಿ, ತನಿಖೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.
ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿ ಅಧಿಕಾರಿ ಹಾಗೂ ಪ್ರಕರಣದ ದಾಖಲೆಗಳು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಹಗರಣದಲ್ಲಿ ರಾಜ್ಯ ಸರ್ಕಾರದ ಪಾತ್ರವಿದೆ ಎಂಬುದು ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಗುಪ್ತಚರ ಇಲಾಖೆಗೆ ವಿಷ್ಯ ಗೊತ್ತಾಗಲ್ಲ ಅಂದ್ರೆ ಹೇಗೆ?
ಗುಪ್ತಚರ ಇಲಾಖೆಗೆ ಐಎಎಸ್ ಅಧಿಕಾರಿ ನಾಪತ್ತೆಯಾಗಿರುವುದು ಗೊತ್ತಾಗುವುದಿಲ್ಲ ಎಂದರೆ ಹೇಗೆ? ತನಿಖೆಗೆ ಸಿಐಡಿ, ಪೊಲೀಸರು ಮುಂದಾಗಿದ್ದರೂ ಅಧಿಕಾರಿ ಸಿಗದಿರುವುದು ಏಕೆ?. ಕೆಪಿಎಸ್‌ಸಿ ಹಗರಣದ ಕುರಿತು ಮಾಹಿತಿ ದೊರೆತ ಕೂಡಲೇ ರಾಜ್ಯಪಾಲರಿಗೆ ವಿವರವಾದ ಪತ್ರ ಬರೆದಿದ್ದೆ. ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ಪತ್ರದಲ್ಲಿ ವಿವರಿಸಲಾಗಿದೆ. ಬಳಿಕ ರಾಜ್ಯಪಾಲರು ಕ್ರಮ ಕೈಗೊಂಡಿದ್ದರು. ಸರ್ಕಾರವೂ ಕ್ರಮಕ್ಕೆ ಶಿಫಾರಸು ಮಾಡಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು ಎಂದು ತಿಳಿಸಿದರು.
‘ಅಧಿಕಾರಿಯನ್ನು ಪತ್ತೆಹಚ್ಚುವ ಬದಲು ಆರ್‌ಎಸ್‌ಎಸ್ ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ಸರ್ಕಾರ ದ್ವೇಷದ ಭಾವನೆಯಿಂದ ವರ್ತಿಸುವುದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:
ಮುಖ್ಯಮಂತ್ರಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವುದಷ್ಟೇ ಸಾಲದು. ಕೆಪಿಎಸ್‌ಸಿಯಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮ ಮತ್ತು ಅನ್ಯಾಯವನ್ನು ಬಯಲಿಗೆಳೆಯಬೇಕು. ಅಧಿಕಾರಿಗೆ ಯಾವುದೇ ಅಪಾಯ ಸಂಭವಿಸಿದರೂ ಅದರ ಹೊಣೆ ಸರ್ಕಾರವೇ ಹೊರಬೇಕು ಎಂದರು.
ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕ್ರಮ
ದೇಶದ ಕೆಲವೆಡೆ ಈರುಳ್ಳಿ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಮಾರು 1.21 ಲಕ್ಷ ಟನ್ ಈರುಳ್ಳಿ ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಬೆಲೆ ಹೆಚ್ಚಿರುವ ಪ್ರದೇಶಗಳಿಗೆ ‘ಈರುಳ್ಳಿ ಎಕ್ಸ್‌ಪ್ರೆಸ್’ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಹೊಸ ಹಂಗಾಮಿನ ಈರುಳ್ಳಿ ಬಂದ ಬಳಿಕ ಬೆಲೆ ನಿಯಂತ್ರಣಕ್ಕೆ ಬರುವ ನಿರೀಕ್ಷೆಯಿದೆ ಎಂದರು.
ಬರ ಘೋಷಣೆಗೆ ಆಗ್ರಹ
ಧಾರವಾಡ ಜಿಲ್ಲೆಯಲ್ಲಿ ಮಳೆ ಕೊರತೆಯಿದ್ದರೂ ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಿಲ್ಲ. ರಾಜ್ಯ ಸರ್ಕಾರ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.



