ಹೊಸದಿಗಂತ ವರದಿ ಹಾವೇರಿ :
ತಮ್ಮ ಕುಟುಂಬದ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಸಾರ್ವಜನಿಕವಾಗಿ ಹೊಡೆದು, ಚಿತ್ರಹಿಂಸೆ ನೀಡಿ, ನಂತರ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟ ಭಯಾನಕ, ಅಮಾನವೀಯ ಘಟನೆ ಹಾನಗಲ್ಲ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ.
ಮೃತ ವ್ಯಕ್ತಿಯನ್ನುಅದೇ ಗ್ರಾಮದ ಪ್ರಕಾಶ ತಂದೆ ಲಕ್ಷ್ಮಣ ಒಲೇಕಾರ (40) ಎಂದು ಗುರುತಿಸಲಾಗಿದೆ. ಈತ ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ ಮಹಿಳೆಯ ಕುಟುಂಬದ ಸುಮಾರು ಒಂಬತ್ತು ಜನರು ಸೇರಿಕೊಂಡು ಪ್ರಕಾಶನನ್ನು ಅವನ ಮನೆಯಿಂದ ಹಿಡಿದು ತಂದು ವಿದ್ಯುತ್ ಕಂಬಕ್ಕೆ ಕಟ್ಟಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಥಳಿಸಿದ್ದಾರೆ.
ಅಲ್ಲದೇ ಬಡಿಗೆಗಳಿಂದಲೂ ತೀವ್ರ ಹಲ್ಲೆ ನಡೆಸಿ, ಆತನ ಕಾಲಿನ ಬಳಿ ಭತ್ತದ ಹುಲ್ಲು ಹಾಕಿ ಬೆಂಕಿ ಹಚ್ಚಿದ್ದಾರೆ. ಹಲ್ಲೆ ಮತ್ತು ತೀವ್ರವಾಗಿ ಸುಟ್ಟು ಗಾಯಗೊಂಡ ಪ್ರಕಾಶನನ್ನು ಹಾನಗಲ್ಲ ತಾಲೂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಪ್ರಕಾಶ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಈ ವೇಳೆ ಜಯಾ ಎಂಬ ಮಹಿಳೆ ಹಾಗೂ ಮೃತ ಪ್ರಕಾಶನ ಸಹೋದರ ಫಕ್ಕೀರೇಶನ ಮೇಲೂ ಹಲ್ಲೆ ನಡೆಸಿದ್ದು ಇವರಿಬ್ಬರೂ ಸಹ ಗಾಯಗೊಂಡಿದ್ದಾರೆ. ಮೃತನ ಸಹೋದರ ಫಕ್ಕೀರೇಶ ನೀಡಿದ ದೂರಿನ ಮೇರೆಗೆ ದೂರು ದಾಖಲಾಗಿದ್ದು, ಎಲ್ಲಾ ಒಂಬತ್ತು ಜನರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.