ಸಾವಿನ ಹಿಂದೆ ಶಂಕೆ: ಕಣಿಯೂರಿನಲ್ಲಿ ದಫನಗೊಂಡ ಶವ ಮತ್ತೆ ಮೇಲಕ್ಕೆತ್ತಿದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾವಿನ ಕುರಿತು ಶಂಕೆ ಮೂಡಿದ ಹಿನ್ನಲೆಯಲ್ಲಿ ಹೂತಿದ್ದ ಶವವನ್ನು ಮತ್ತೆ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಣಿಯೂರು ಗ್ರಾಮದ ಪೊಯ್ಯ ಎಂಬಲ್ಲಿ ನಡೆದಿದೆ.
ಬಿಎಸ್ಸೆನ್ನೆಲ್ ನಿವೃತ್ತ ಉದ್ಯೋಗಿ, ಬಹುಜನ ಸಮಾಜ ನಾಯಕ, ಸಾಮಾಜಿಕ ಹೋರಾಟಗಾರ  ಪಿ. ಡೀಕಯ್ಯ ಎಂಬವರು ಹತ್ತು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿಯ ತನ್ನ ಮನೆಯಲ್ಲಿ ಕುಸಿದು ಬಿದ್ದು ಗಾಯಗೊಂಡವರನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಲಾಗಿತ್ತು. ಘಟನೆ ಸಂಭವಿಸಿದಾಗ ಅವರ ಪತ್ನಿ ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಕಣಿಯೂರು ಪೊಯ್ಯದಲ್ಲಿರುವ ಡೀಕಯ್ಯರ ಮೂಲ ಮನೆಯಲ್ಲಿದ್ದು, ಅತ್ತೆಯ ಸೇವೆ ಮಾಡುತ್ತಿದ್ದರು. ಗರ್ಡಾಡಿಯ ಮನೆಯಲ್ಲಿ ಡೀಕಯ್ಯ ಅವರು ಒಬ್ಬರೇ ಇದ್ದರು. ಬೆಳಗ್ಗೆ ಅವರ ಪತ್ನಿ ಗರ್ಡಾಡಿಯ ಮನೆಗೆ ಹೋದಾಗ ಅವರು ಕುಸಿದು ಬಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿರುವುದು ಕಂಡು ಬಂದಿತ್ತು. ವೆಂಟಿಲೆಂಟರ್‌ನಲ್ಲಿದ್ದ ಅವರು ೨೪ ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದರು. ಮೃತದೇಹವನ್ನು ಕಣಿಯೂರು ಗ್ರಾಮದ ಪದ್ಮುಂಜ ಬಳಿಯ ಪೊಯ್ಯದ ಮೂಲ ಮನೆಗೆ ತಂದು ಅವರ ಆಶಯದಂತೆ ದಫನ ಮಾಡಲಾಗಿತ್ತು.
ಇದೀಗ ಸಾವಿನ ಹಿಂದೆ ಸಂಶಯ ವ್ಯಕ್ತವಾಗಿದ್ದು, ಮೃತರ ತಾಯಿಯ ಕುಟುಂಬಸ್ಥರ ಪರವಾಗಿ ಡೀಕಯ್ಯ ಅವರ ಸಹೋದರಿ ವಿಮಲ ರವರ ಗಂಡ ಪದ್ಮನಾಭ ಎಂಬವರು ಜು.೧೫ರಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿ, ತನಿಖೆಗೆ ಆಗ್ರಹಿಸಿದ್ದರು. ಇದೀಗ ಪುತ್ತೂರು ಉಪವಿಭಾಗಾಧಿಕಾರಿಯವರ ಆದೇಶದಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನ್ವಿಕಂ ನೇತೃತದಲ್ಲಿ ದಫನ ಮಾಡಿದ ಮೃತದೇಹವನ್ನು ಸೋಮವಾರ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!