ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರದ ಕಾಡಯರಪ್ಪನಹಳ್ಳಿಯಲ್ಲಿರುವ ಖಾಸಗಿ ಇಂಟರ್ನ್ಯಾಷನಲ್ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮಗನ ಸಾವಿನಿಂದ ಆಕ್ರೋಶಗೊಂಡ ಪೋಷಕರು ಹಾಗೂ ಸಂಬಂಧಿಕರು ಶಾಲೆಯ ವಾರ್ಡನ್ ಹಾಗೂ ದೈಹಿಕ ಶಿಕ್ಷಕನನ್ನು ಸಾರ್ವಜನಿಕವಾಗಿ ಎಳೆದಾಡಿ, ತೀವ್ರವಾಗಿ ಥಳಿಸಿರುವ ಘಟನೆ ನಡೆದಿದೆ.
ಯಲಹಂಕ ತಾಲೂಕಿನ ಸುಬೇದಾರ್ ಪಾಳ್ಯದಗುರುಕಿರಣ್ (12 ವರ್ಷ) ಮೃತ ವಿದ್ಯಾರ್ಥಿ. ಬುಧವಾರ ಬೆಳಿಗ್ಗೆ ಎಂದಿನಂತೆ ವಿದ್ಯಾರ್ಥಿಗಳಿಗೆ ಜಾಗಿಂಗ್ ಮಾಡಿಸಲಾಗುತ್ತಿತ್ತು. ಈ ವೇಳೆ ಗುರುಕಿರಣ್ ಹಠಾತ್ತನೆ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪೋಷಕರ ಗಂಭೀರ ಆರೋಪಗಳೇನು?
ಮಗನ ದೇಹದ ಮೇಲೆ ಗಾಯದ ಗುರುತುಗಳಿದ್ದು, ಶಿಕ್ಷಕರೇ ಹೊಡೆದು ಕೊಂದಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕ ಬಿದ್ದಿದ್ದಾನೆ ಎನ್ನಲಾದ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಶಾಲೆ ಹೇಳುತ್ತಿರುವುದು ಪೋಷಕರ ಅನುಮಾನವನ್ನು ಹೆಚ್ಚಿಸಿದೆ.
ಇದನ್ನೂ ಓದಿ:
ರಣರಂಗವಾದ ಶಾಲಾ ಆವರಣ!
ಮಗನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಬಂಧಿಕರು ಶಾಲೆಗೆ ಮುತ್ತಿಗೆ ಹಾಕಿದರು. ಈ ವೇಳೆ ಸಿಕ್ಕ ವಾರ್ಡನ್ ಮತ್ತು ಶಿಕ್ಷಕನಿಗೆ ಹಿಗ್ಗಾಮುಗಾ ಥಳಿಸಲಾಯಿತು. ಸ್ಥಳಕ್ಕೆ ಪೊಲೀಸರು ಬಂದಾಗ ಮೃತನ ತಂದೆ ಪೊಲೀಸ್ ಜೀಪ್‌ಗೆ ಅಡ್ಡ ಮಲಗಿ ಆಕ್ರಂದನ ವ್ಯಕ್ತಪಡಿಸಿದರು.ಸದ್ಯ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



