ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಹೆಬ್ಬಾಳದ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 25 ವರ್ಷದ ಜಿಮ್ ಟ್ರೈನರ್ ನಂದನ್ ಮೇಲೆ ಸ್ನೇಹಿತರೇ ಹಲ್ಲೆ ಮಾಡಿ ಕೊಂದಿದ್ದಾರೆ ಎನ್ನುವ ಆರೋಪ ಎದುರಾಗಿದೆ.
ಜಿಮ್‌ನ ಮೊದಲ ಆನಿವರ್ಸರಿ ಇದ್ದ ಕಾರಣ ರಾತ್ರಿ ಮನೆಗೆ ಬರುವುದು ಲೇಟಾಗುತ್ತದೆ ಎಂದು ನಂದನ್ ಹೇಳಿ ಹೋಗಿದ್ದರು. ಆನಿವರ್ಸರಿ ಮುಗಿಸಿ ತದನಂತರ ಜಿಮ್‌ನ ಇತರ ಸಿಬ್ಬಂದಿ ಜೊತೆ ಸ್ನೇಹಿತರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು.
ಈ ವೇಳೆ ಯಾವುದೋ ವಿಚಾರಕ್ಕೆ ಗಲಾಟೆಯಾಗಿ, ಅದು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಹೇಳಲಾಗಿದೆ. ನಂದನ್ ಮೇಲೆ ಇತರರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ತದನಂತರ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ನಂದನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮಗನ ಮೃತದೇಹದ ಮೇಲೆ ಗಾಯದ ಗುರುತುಗಳಿವೆ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಏನೋ ಗಲಾಟೆ ಆಗಿದೆ. ಅದರಿಂದ ಮಗನನ್ನು ಕೊಲ್ಲಲಾಗಿದೆ, ತನಿಖೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.



