August 24, 2026
Monday, August 24, 2026
spot_img

ಮೋದಿ ಸಮ್ಮುಖದಲ್ಲಿ ನಾಳೆ ಸುವೇಂದು ಪ್ರಮಾಣ ವಚನ: ಬಂಗಾಳದಲ್ಲಿ ಕೇಸರಿ ಪಡೆಯ ಹೊಸ ಮನ್ವಂತರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಜನತಾ ಪಕ್ಷ, ರಾಜ್ಯದ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನಾಗಿ ಸುವೇಂದು ಅಧಿಕಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಅವರು ನಾಳೆ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸುವೇಂದು ಅಧಿಕಾರಿ ಅವರು ಈ ಹಿಂದೆ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಗಮನ ಸೆಳೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಮಮತಾ ಅವರ ಭದ್ರಕೋಟೆ ಎನಿಸಿದ ಭವಾನಿಪುರ ಕ್ಷೇತ್ರದಲ್ಲೂ ಜಯಭೇರಿ ಬಾರಿಸುವ ಮೂಲಕ ಟಿಎಂಸಿ ಸರ್ಕಾರಕ್ಕೆ ಸವಾಲು ಹಾಕಿದ್ದರು. ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಅವರ ಸಮ್ಮುಖದಲ್ಲಿ ಇಂದು ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ನೂತನ ಶಾಸಕರ ಸಭೆ ನಡೆಯಿತು. ಈ ವೇಳೆ ಅಮಿತ್ ಶಾ ಮಾತನಾಡಿ, “ಸುವೇಂದು ಅಧಿಕಾರಿ ಅವರ ಹೆಸರನ್ನು ಶಾಸಕರು ಮೊದಲಿಗೆ ಪ್ರಸ್ತಾಪಿಸಿದರು. ಎರಡನೇ ಹೆಸರನ್ನು ಸೂಚಿಸಲು ಅವಕಾಶ ನೀಡಿದ್ದರೂ ಯಾರೂ ಮುಂದ ಬರಲಿಲ್ಲ. ಹೀಗಾಗಿ ಸುವೇಂದು ಅವರನ್ನು ಅವಿರೋಧವಾಗಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ,” ಎಂದು ಘೋಷಿಸಿದರು.

ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ನಾಳೆ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ದೆಹಲಿಯ ಪ್ರಭಾವಿ ನಾಯಕರು ಸಾಕ್ಷಿಯಾಗಲಿದ್ದಾರೆ.

ದೇಶದ ವಿವಿಧ 20 ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕಾಗಿ ಇಡೀ ಪಶ್ಚಿಮ ಬಂಗಾಳ ಕೇಸರಿಮಯವಾಗಿದ್ದು, ರವೀಂದ್ರನಾಥ ಟಾಗೋರ್ ಅವರ ಜನ್ಮದಿನದ ಈ ಸಂದರ್ಭದಲ್ಲಿ ಬಂಗಾಳದ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !