ಜಯನಗರದಲ್ಲಿ ಆರಂಭವಾಗಿದೆ ದೇಶಿ ವಸ್ತುಗಳ ಸ್ವದೇಶಿ ಮೇಳ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಭಾರತ ಸ್ವಾವಲಂಬಿ ರಾಷ್ಟ್ರ. ಹಿಂದೆ ಇತರೆ ರಾಷ್ಟ್ರಗಳು ನಮ್ಮನ್ನು ಅವಲಂಬಿಸಿದ್ದವು. ಕಾಲ‌ ಬದಲಾದಂತೆ ಜನರಿಗೆ ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ಬೆಳೆಯುತ್ತಾ ಸ್ವದೇಶೀ ವಸ್ತುಗಳು ಕಡೆಗಣಿಸಲ್ಪಟ್ಟಿವೆ. ಇದೀಗ ಜಾಗೃತ ಮನಸ್ಸುಗಳಿಂದ ಮತ್ತೆ ಜನರಿಗೆ ಸ್ವದೇಶಿ ವಸ್ತು ಬಳಕೆಯತ್ತ ಒಲವು ಮೂಡುತ್ತಿದೆ ಎಂದು ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.
ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನ (ಶಾಲಿನಿ ಗ್ರೌಂಡ್ಸ್)ದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಅವರು ಆಶೀರ್ವದಿಸಿದರು.
ನಮ್ಮ ದೇಶ ಆತ್ಮನಿರ್ಭರದಿಂದ ವಿದೇಶಿ ವ್ಯಾಮೋಹದ ಹಿಂದೆ ಹೋಯಿತು. ಆದರೆ ಈಗ ಅದು ಬದಲಾಗುತ್ತಿದೆ. ನಮ್ಮ ದೇಶದ ವಸ್ತುಗಳ ಬೆಲೆ ತಿಳಿಯುತ್ತಿದೆ. ಇದು ಇನ್ನೂ ಮುಂದೆ ಉತ್ತಮ ಬೆಳವಣಿಗೆಗೆ ಹಾದಿ ಆಗಲಿದೆ. ಅದರೊಂದಿಗೆ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸುವ ಕೆಲಸ ಈಗ ಆಗುತ್ತಿದ್ದು, ಇದು ದೇಶದ ಪ್ರತಿಯೊಬ್ಬರನ್ನೂ ಪ್ರೋತ್ಸಾಹಿಸುವ ಕೆಲವಾಗಿದೆ. ಇದರಿಂದ ಪರದೇಶದ ಮೇಲಿನ ವ್ಯಾಮೋಹಕ್ಕಿಂತ ನಮ್ಮ ದೇಶದಲ್ಲಿನ ಮಹಿಮೆ ಎಲ್ಲರಿಗೂ ತಿಳಿಯುತ್ತದೆ. ಅಲ್ಲದೆ ಕಳೆದು ಹೋಗಿರುವ ನಮ್ಮ ಆತ್ಮವಿಶ್ವಾಸ ಮತ್ತೆ ಮರುಕಳಿಸುತ್ತದೆ. ಇದು ಇಲ್ಲಿನ ಜನರಿಗೆ ಮಾರುಕಟ್ಟೆಗೆ ನೀಡುವ ಉತ್ತಮ ಪ್ರೋತ್ಸಾಹ ಹಾಗೂ ನಮ್ಮಲ್ಲಿ ಆಗುವ ಬಹುದೊಡ್ಡ ಬದಲಾವಣೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ಸ್ವದೇಶಿ ಮೇಳದಂತಹ ಕಾರ್ಯಕ್ರಮಗಳು ಜನರಲ್ಲಿ ಸ್ವದೇಶಿ ಭಾವನೆಯನ್ನು ಮೂಡಿಸುವುದರ ಜೊತೆಗೆ ಪೂರ್ಣ ಪ್ರಮಾಣದ ಸ್ವಾವಲಂಬಿಯಾಗಿಸುವ ಮೂಲಕ ರಾಷ್ಟ್ರವನ್ನು ಸದೃಢಗೊಳಿಸುತ್ತಿವೆ. ಇದರಿಂದ ಜನರಲ್ಲಿ ಸ್ವದೇಶಿ ಮಾನಸಿಕತೆ ಬಲಗೊಳ್ಳುತ್ತದೆ. ಇನ್ನು ಸ್ವದೇಶಿ ಮಂಚ್ ಮಾಡಿರುವ ಈ ಮೇಳ ಮೋದಿ ಅವರ ಕನಸನ್ನು ನನಸಾಗಿಸುವತ್ತ ಹೆಜ್ಜೆ ಹಾಕುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರಜ್ಞ ಹಾಗೂ ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಅವರು, ದೇಶದಲ್ಲಿ ಕಿರು ಉದ್ಯಮ ವಿಸ್ತಾರವಾದ ಜಾಲವನ್ನು ಹೊಂದಿದೆ. ಒಟ್ಟು 6.34 ಲಕ್ಷ ಕಿರು ಕೈಗಾರಿಕೆಯಲ್ಲಿ ಶೇ. 51ರಷ್ಟು ಗ್ರಾಮೀಣ ಹಾಗೂ ಶೇ. 49ರಷ್ಟು ನಗರ ಪ್ರದೇಶದಲ್ಲಿದೆ. ಇವುಗಳು ಶೇ. 30ರಷ್ಟು ಜಿಡಿಪಿ ಪಾವತಿಸುತ್ತಿವೆ. ಜೊತೆಗೆ ಸಣ್ಣ ಉದ್ಯಮದ ಉತ್ಪನ್ನಗಳಲ್ಲಿ ಶೇ. 48ರಷ್ಟು ವಿದೇಶಿ ರಫ್ತು ಹೊಂದಿದೆ. ಆದರೆ ನಮ್ಮಲ್ಲಿ ಇಂದಿಗೂ ದೊಡ್ಡ ಕೈಗಾರಿಕೆಯಿಂದಲೇ ಅಭಿವೃದ್ಧಿಯಾಗುತ್ತಿದೆ ಎನ್ನುವ ಭ್ರಮೆಯಲ್ಲಿದ್ದೇವೆ. ಆದರೆ ಅಭಿವೃದ್ಧಿಯಲ್ಲಿ‌ ಮುಖ್ಯ ಪಾತ್ರವಹಿಸಿರುವುದು ಕಿರಿ ಉದ್ಯಮ. ನಾವು ಕಲಿಯುವ ಪಠ್ಯ ಪುಸ್ತಕದಲ್ಲಿ ಸಹ ಕೇವಲ  ಬೃಹತ್ ಕೈಗಾರಿಕೆ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಇದರಿಂದಾಗಿ ಯುವಜನರಿಗೆ ಕಿರು ಉದ್ಯಮದ ಬಗ್ಗೆ ಮಾಹಿತಿ ಕೊರತೆಯಿಂದ ದೂರ ಉಳಿದಿದ್ದಾರೆ ಎಂದು ಹೇಳಿದರು.
ಮ್ಯಾಗಸ್ಸೆಸೆ ಪುರಸ್ಕೃತ ಸೌರತಜ್ಞ ಡಾ. ಹರೀಶ್ ಹಂದೆ ಮಾತನಾಡಿ, ಸ್ವದೇಶಿ ಅಭಿಯಾನ ಎನ್ನುವುದು ಕೇವಲ ನಮ್ಮ ಸುತ್ತಲಿಗೆ ಸೀಮಿತವಾಗಬಾರದು. ಬದಲಿಗೆ ನಾವು ಪ್ರಪಂಚಕ್ಕೆ ಮಾದರಿಯಾಗಿ ನಿಲ್ಲಬೇಕು. ಆಗ ನಿಜವಾದ ಸ್ವದೇಶಿಯಾಗಿ ನಾವು ಹೊರಹೊಮ್ಮುತ್ತೇವೆ. ಅದರೊಂದಿಗೆ ಕೃಷಿ ಜೀವನ ನಡೆಸುವವರಿಗೆ ನಾವು ಹೆಚ್ಚಿನ ಗೌರವ ನೀಡಬೇಕು. ಅವರಿಗೆ ನಿಜಕ್ಕೂ ಹೆಚ್ಚಿನ ಜ್ಞಾನ ಇರುತ್ತದೆ. ಅದನ್ನು ನಾವು ಗೌರವಿಸಿ ಡಾಕ್ಟರೇಟ್ ಪದವಿ ನೀಡುವ ಮೂಲಕ ಹೊಸ ಆಂದೋಲನ ಆರಂಭಿಸಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರ ಕಾರ್ಯವಾಹ ನಾ.ತಿಪ್ಪೆಸ್ವಾಮಿ, ಸ್ವದೇಶಿ ಮೇಳ ಸಂಯೋಜಕಿ ತೇಜಸ್ವಿನಿ ಅನಂತಕುಮಾರ್, ಸಂಚಾಲಕ ಹಾಗೂ ಹಿರಿಯ ನಟ ಪ್ರಕಾಶ್ ಬೆಳವಾಡಿ ಮೊದಲಾದವರು ಉಪಸ್ಥಿತರಿದ್ದರು.
ಸ್ವದೇಶಿ ಮೇಳದಲ್ಲಿ 220ಕ್ಕೂ ಅಧಿಕ ಮಳಿಗೆಗಳಿವೆ. ನಿತ್ಯ ಬಳಕೆಯ ವಸ್ತುಗಳು, ಖಾದಿ ಉತ್ಪನ್ನಗಳು, ಗೃಹ ಉತ್ಪನ್ನಗಳು, ನೈಸರ್ಗಿಕ ಸೌಂದರ್ಯವರ್ಧಕಗಳು, ಗೋ ಉತ್ಪನ್ನಗಳು, ತಂತ್ರಜ್ಞಾನ ಸಂಬಂಧಿ ಹಾಗೂ ದೇಸಿ ಆಹಾರ ಮಳಿಗೆಗಳಿದ್ದು, ಸಾರ್ವಜನಿಕರು ದೇಶಿ ವಸ್ತುಗಳನ್ನು ವೀಕ್ಷಿಸಿ, ಖರೀದಿಸುವ ಅವಕಾಶವಿದೆ. ವಿವಿಧ ಉಪನ್ಯಾಸಗಳನ್ನು ಆಯೋಜಿಸಿದ್ದು, ಭಾಗವಹಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!