ಸ್ವರ್ಗಿಯ ನಾಗಭೂಷಣಜೀಯವರ ಸ್ಮರಣಿಕೆಯ ‘ಮನೆ ಮನಗಳ ಭೂಷಣ’ ಪುಸ್ತಕ ಲೋಕಾರ್ಪಣೆ

ಹೊಸದಿಗಂತ ವರದಿ,ಬೆಂಗಳೂರು:

ನಾಗಭೂಷಣಜೀ ಅವರ ಕಾಲವಾಗಿ ದಶಕ ಕಳೆದರೂ, ಅವರ ಜೀವನ ಹಲವು ಕಾರ್ಯಕರ್ತರು ಪ್ರಚಾರಕರಲ್ಲಿ ಹೆಚ್ಚ ಹಸಿರಾಗಿ ಉಳಿದುಕೊಂಡಿದೆ. ಅವರು ಮುಂದಿನ ಪೀಳಿಗೆಗೆ ಪ್ರಚಾರಕರೊಬ್ಬರು ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿರುವಂತೆ ತಮ್ಮ ಜೀವನವನ್ನು ಪೂರೈಸಿದರು ಎಂದು ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ಅವರು ಹೇಳಿದರು.

ಮಂಗಳವಾರ ನಗರದ ರಂಗರಾವ್ ರಸ್ತೆಯ ಉತ್ತುಂಗ ಸಭಾಂಗಣದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಮತ್ತು ಹಿಂದು ಸೇವಾ ಪ್ರತಿಷ್ಠಾನದ ವತಿಯಿಂದ ಸ್ವರ್ಗಿಯ ನಾಗಭೂಷಣಜೀ ಅವರ ಸ್ಮರಣಿಕೆಯ ಪುಸ್ತಕ ಮನೆ ಮನಗಳ ಭೂಷಣ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಾಗಭೂಷಣಜೀ ಅವರು ಪ್ರಚಾರಕರಾಗಿ ಕೆಲಸ ಮಾಡಿದ ಕಾಲ ಅತ್ಯಂತ ಕಠಿಣವಾಗಿತ್ತು. ಅದು ಪ್ರಚಾರಕರೆಂದರೆ ಹುಚ್ಚರು ಎಂದು ಮಾತನಾಡಿಕೊಳ್ಳುವ ಕಾಲವಾಗಿತ್ತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಮಾತನಾಡುವುದೇ ದೊಡ್ಡ ಅಪರಾಧ ಎಂಬಂತೆ ಬಿಂಬಿಸಲಾಗುತ್ತಿತ್ತು. ಸಂಘದ ಕಾರ್ಯವನ್ನು ನಡೆಸುತ್ತಾ ಜನರಿಗೆ ಮನಮುಟ್ಟುವಂತೆ ಹೇಳುವ ಕೆಲಸವನ್ನೂ ಮಾಡಬೇಕಿದ್ದ ಸಮಯದಲ್ಲಿ ನಾಗಭೂಷಣಜೀ ಅವರ ಕಾರ್ಯತತ್ಪರತೆ ಅಮೋಘವಾಗಿತ್ತು ಎಂದು ತಿಳಿಸಿದರು.

ನಾಗಭೂಷಣಜೀ ಅವರು ಸಂಘವನ್ನು ಕಟ್ಟುವ ಕಾಲದಲ್ಲಿ ಪ್ರಚಾರಕರ ಜೀವನ ಕಷ್ಟದಾಯಕವಾಗಿತ್ತು. ಮೂರರಿಂದ ನಾಲ್ಕು ದಿನಗಳು ಉಪವಾಸ ಇರುವ ಪ್ರಸಂಗಗಳು ಆಗ ಸರ್ವೇ ಸಾಮಾನ್ಯವಾಗಿತ್ತು. ನಾಗಭೂಷಣಜೀ ಅವರು ಮೊದಲು ಪ್ರಚಾರಕರಾಗಿ ಕೆಲಸ ಮಾಡಲು ಆರಂಭಿಸಿದಾಗ ಗಾಂಧಿ ಹತ್ಯೆ ನಡೆದು ಅದರ ಆರೋಪವನ್ನು ವಿನಾಕಾರಣ ಸಂಘದ ಮೇಲೆ ಹೋರಿಸಲಾಗಿತ್ತು. ಆದರೆ, ಅವರು ಸಂಕಲ್ಪ ಶಕ್ತಿಯಿಂದ ಎಲ್ಲ ಅಡೆ ತಡೆಗಳನ್ನು ಮೀರಿದರು ಎಂದರು.

ಆರ್‌ಎಸ್‌ಎಸ್‌ ಹಿರಿಯ ಕಾರ್ಯಕರ್ತ ವೈ. ಕೆ. ರಾಘವೇಂದ್ರ ರಾವ್ ಅವರು ಮಾತಾನಾಡಿ, 70 ರ ದಶಕದಲ್ಲಿ ನಾಗಭೂಷಣಜೀ ಕಾರ್ಯಾಲಯ ಪ್ರಮುಖರಾಗಿ ನಿಯುಕ್ತಿಗೊಂಡ ಮೇಲೆ ಅವರ ನಿಕಟ ಪರಿಚಯವಾಯಿತು. ನಂತರ ಕಾರ್ಯಾಲಯದ ಕೆಲಸದ ನಿಮಿತ್ತ ಲೀಗಲ್ ಲಿಂಕ್ ಬೆಳೆಯಿತು. ಆಗ ಗುರುದಕ್ಷಣೆಯ ಮೇಲೆ ತೆರಿಗೆ ವಿಧಿಸಲು ಅಂದಿನ ಪ್ರಧಾನಿ ಇಂದಿರಾಗಾಂಧಿ ಮುಂದಾಗಿದ್ದರು. ಆ ಸಂದರ್ಭದಲ್ಲಿ ಹೆಚ್ಚಿನ ಮಾತುಕತೆ ನಮ್ಮಿಬ್ಬರ ನಡುವೆ ನಡೆಯುತ್ತಿತ್ತು ಎಂದು ನೆನೆದರು. ಅನೇಕ ಟ್ರಸ್ಟ್‌ಗಳನ್ನು ನಾಗಭೂಷಣಜೀ ತುಂಬಾ ಯಶಸ್ವಿಯಾಗಿ ನಿಭಾಯಿಸುತ್ತಿದ್ದರು. ಅದ್ಭುತ ಸಂಪರ್ಕ ಅವರಿಗಿತ್ತು. ಅವರ ಸ್ವಭಾವವು ಎಲ್ಲರನ್ನೂ ಸೆಳೆಯುವಂತಿತ್ತು. ವಿದೇಶ ವಿಭಾಗದ ಕಾರ್ಯವನ್ನೂ ಅವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವಿದೇಶದಲ್ಲಿನ ಕಾರ್ಯಕರ್ತರು ಸ್ವಯಂ ಸೇವಕರಿಗೆ ಅವರು ಅಚ್ಚುಮೆಚ್ಚಾಗಿದ್ದರು. ಗೊತ್ತಿಲ್ಲದ ವಿಚಾರವನ್ನು ಯಾವುದೇ ಮುಜುಗರವಿಲ್ಲದೆ ಕೇಳಿ ತಿಳಿದುಕೊಳ್ಳುವ ಗುಣ ಅವರದ್ದಾಗಿತ್ತು ಎಂದು ತಿಳಿಸಿದರು.

ಆರ್‌ಎಸ್‌ಎಸ್‌ ಜೇಷ್ಠಪ್ರಚಾರಕ ಸು. ರಾಮಣ್ಣ ಮಾತನಾಡಿ, ನಾಗಭೂಷಣ ಅವರ ಆಕೃತಿ ತುಂಬಾ ಚಿಕ್ಕದಾದರೂ, ಅವರ ಪ್ರಭಾವಳಿ ಬಹಳ ದೊಡ್ಡದಾಗಿತ್ತು. ಅವರು ಆಯಸ್ಕಾಂತದಂತೆ ತಮ್ಮತ್ತ ಜನರನ್ನು ಸೆಳೆಯುತ್ತಿದ್ದರು. ಅವರ ಸಾರ್ಥಕ ಜೀವನದ ಕುರಿತು ಪುಸ್ತಕ ಹೊರಬಂದಿರುವುದು ಸಂತಸ ತಂದಿದೆ. ಈ ಪುಸ್ತಕವು ಅಸಂಖ್ಯೆ ಕಾರ್ಯಕರ್ತರ ಕಠಿಣ ಶ್ರಮವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ. ಆರ್ ಸೇರಿದಂತೆ ಇತರರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!