ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿಗೆ ನಾನಾ ಬಗೆಯ ಸಿಹಿತಿಂಡಿಗಳು ಮಾರುಕಟ್ಟೆಗೆ ಬರುತ್ತಿವೆ. ಅದರಲ್ಲೂ 24 ಕ್ಯಾರೆಟ್ ಚಿನ್ನದ ಪದರದಿಂದ ಮಾಡಿದ ʻಸ್ವರ್ಣ ಮುದ್ರಾʼ ಸ್ವೀಟ್ ಜನರಿಂದ ಅಭೂತಪೂರ್ವ ಜನಪ್ರಿಯತೆಯನ್ನು ಗಳಿಸಿದ್ದು, ದೀಪಾವಳಿಗೂ ಮುನ್ನ ಅಹಮದಾಬಾದ್ ನಲ್ಲಿ ಸ್ವರ್ಣ ಮುದ್ರಾ ಎಂಬ ಸಿಹಿತಿಂಡಿ ಗಮನ ಸೆಳೆಯುತ್ತಿದೆ. ಚಿನ್ನದ ಪದರದಿಂದ ತಯಾರಿಸಿದ ಈ ಸಿಹಿತಿನಿಸಿನ ಬೆಲೆ ಕೆಜಿಗೆ ಬರೋಬ್ಬರಿ 21 ಸಾವಿರ ರೂಪಾಯಿ. ಚಿನ್ನ ಲೇಪಿತ ಸಿಹಯ ಒಂದು ಪೀಸ್‌ನ ಬೆಲೆ 1400 ರೂಪಾಯಿ.
ಶಾಕ್ ಆಗ್ತಿದ್ಯಾ..ಆದ್ರೂ ಇದೇ ನಿಜ ಕಣ್ರೀ. ಮಾರುಕಟ್ಟೆಯಲ್ಲಿ ಅಷ್ಟು ಬೇಡಿಕೆಯಿದೆ ಈ ಸಿಹಿ ತಿಂಡಿಗೆ. ಒಂದು ಕಿಲೋ ಸ್ವರ್ಣ ಮುದ್ರಾ ಸಿಹಿ 15 ತುಂಡುಗಳನ್ನು ಹೊಂದಿರುತ್ತದೆ. ಈ ಸಿಹಿತಿಂಡಿಯಲ್ಲಿ ಬಾದಾಮಿ, ಬ್ಲೂಬೆರ್ರಿ, ಪಿಸ್ತಾ, ಕ್ರ್ಯಾನ್‌ಬೆರಿ ಮುಂತಾದ ವಿವಿಧ ಪದಾರ್ಥಗಳಿಂದ ತಯಾರಿಸಲಾಗಿದೆ. ಈ ಅಪರೂಪದ ಸಿಹಿತಿಂಡಿಗಳನ್ನು ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಗ್ವಾಲಿಯಾ ಎಸ್‌ಬಿಆರ್ ಔಟ್‌ಲೆಟ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ಈ ವರ್ಷ ವಿಶೇಷವಾಗಿ ತಯಾರಿಸಲಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸ್ವೀಟ್ ಹೌಸ್ ನ ಮಾಲಕಿ ರವೀನಾ ತಿಲವಾಣಿ ತಿಳಿಸಿದರು.
ಈ ಚಿನ್ನದ ಲೇಪಿತ ಸಿಹಿತಿಂಡಿಗಳಿಗೆ ಆರ್ಡರ್ ತೆಗೆದುಕೊಂಡು ಅದಕ್ಕೆ ತಕ್ಕಂತೆ ತಯಾರಿಸುತ್ತಿದ್ದಾರಂತೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳಲ್ಲದೆ, ಇತರೆ ಸಿಹಿತಿಂಡಿಗಳು ಮತ್ತು ಡ್ರೈಫ್ರೂಟ್ಸ್ ಕೆಜಿಗೆ 350 ರಿಂದ 15,000 ರೂಪಾಯಿ ಬೆಲೆಯಿದೆ. ಇವೆಲ್ಲಾ ಬಿಡಿ ಎಲ್ಲರೂ ಖರೀದಿಸುತ್ತಾರೆ. ಆದರೆ, ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ಖರೀದಿಸಲು ಮಾತ್ರ ಕಿಸೆಯಲ್ಲಿ ಹಣ ಇಟ್ಟಿರಲೇಬೇಕು.