ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜು ಆವರಣದಲ್ಲಿ ನೇಹ ಹಿರೇಮಠಗಳನ್ನು ಫಯಾಜ್ ಎನ್ನುವ ಹಂತಕ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣದಂತೆ ಹಾವೇರಿಯಲ್ಲಿ ಹಿಂದು ಯುವತಿಯನ್ನು ನಯಾಜ್, ಆತನ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ನಡೆದ ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣ ರಾಜ್ಯದಲ್ಲೇ ದೊಡ್ಡ ಸಂಚಲನ ಮೂಡಿಸಿದೆ.
ಮಾ. 6ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೆಪುರ ಬಳಿ ಅಪರಿಚಿತ ಯುವತಿ ಶವ ಪತ್ತೆಯಾಗಿತ್ತು. ಮೊದಲಿಗೆ ಯು.ಡಿ.ಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಹಲಗೇರಿ ಠಾಣೆ ಪೊಲಿಸರು ಯುವತಿ ಶವದ ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಸಂಸ್ಕಾರ ಕೂಡಾ ಮಾಡಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕೊಲೆ ಮಾಡಿ ತುಂಗಭದ್ರಾ ನದಿಯಲ್ಲಿ ಬಿಸಾಡಿ ಹೋಗಿರೋದು ಗೊತ್ತಾಗಿತ್ತು. ತನಿಖೆ ಆರಂಭಿಸಿದ ಪೊಲೀಸರಿಗೆ ಅದು ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಎಂಬ ಯುವತಿ ಶವ ಎನ್ನುವುದು ಗೊತ್ತಾಗಿದೆ.
ಸ್ವಾತಿ ಎಂಬ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಯಾಜ್ ಹಾಗೂ ವಿನಯ್, ದುರ್ಗಾಚಾರಿ ಎಂಬ ಯುವಕರೇ ಹತ್ಯೆಗೈದವರು ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನು. ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸೋ ಸ್ಪರ್ಧೆ ಅಭಿಮಾನಿಗಳಾಗಿದ್ದರು. ಹೋರಿ ಬೆದರಿಸೋ ಸ್ಪರ್ಧೆ ಇದ್ದಲಿಗೆ ಸ್ವಾತಿ ಹಾಜರಾಗ್ತಿದ್ದಳು. ಈ ವೇಳೆ ನಯಾಜ್, ವಿನಯ್, ದುರ್ಗಾಚಾರಿ ನಡುವೆ ಸ್ನೇಹ ಬೆಳೆದಿತ್ತು.
ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ನಯಾಜ್, ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಅಂತ ಜಗಳ ಆಡಿದ್ದಳು. ಬಳಿಕ ನಯಾಜ್ ಹಾಗೂ ಸ್ವಾತಿ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. ವಿನಯ್ ಹಾಗೂ ದುರ್ಗಾಚಾರಿಗೆ ಈ ವಿಚಾರವನ್ನು ನಯಾಜ್ ತಿಳಿಸಿದ್ದನು .
ಮಾ. 3ರಂದು ಆರೋಪಿಗಳು ಸ್ವಾತಿಗೆ ಫೋನ್ ಮಾಡಿ ಬರ ಹೇಳಿದ್ದರು. ಬಾಡಿಗೆ ಕಾರ್ ಮಾಡಿಕೊಂಡು ಬಂದು ಆಕೆಯನ್ನು ಆರೋಪಿಗಳು ಕಾರಿನಲ್ಲಿ ಕರೆದೊಯ್ದಿದ್ದರು. ರಾಣೇಬೆನ್ನೂರು ಹೊರ ವಲಯದ ಸುವರ್ಣ ಪಾರ್ಕ್ಗೆ ಕರೆದುಕೊಂಡು ಹೋಗಿದ್ದರು. ಬಾಡಿಗೆ ಕಾರಿನಲ್ಲಿ ರಟ್ಟಿಹಳ್ಳಿ ಬಳಿ ಇರುವ ಕಬ್ಬಿಣಕಂತಿ ಮಠದ ಬಳಿ ಪಾಳು ಬಿದ್ದಿರುವ ತರಳಬಾಳು ಶಾಲೆಗೆ ಕರೆದೊಯ್ದು ಕುತ್ತಿಗೆಗೆ ಟವಲ್ ಹಾಕಿ ಉರುಳು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಕಾರಿನ ಡಿಕ್ಕಿಯಲ್ಲಿ ಶವ ಸಾಗಿಸಿದ್ದು, ತುಂಗಭದ್ರಾ ನದಿಗೆ ಶವ ಬಿಸಾಡಿದ್ದರು.
ಆರೋಪಿ ನಯಾಜ್, ವಿನಯ್ ಹಾಗೂ ದುರ್ಗಾಚಾರಿಯನ್ನು ಪೊಲೀಸರು ಬಂಧಿಸಿದ್ದಾರೆ.