ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಟೊಮೆಟೋ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಸಿಹಿ ಸುದ್ದಿ ಇದ್ದು, ಕೇಂದ್ರ ಸರ್ಕಾರ ನಿರ್ದಿಷ್ಟ ನಗರಗಳಲ್ಲಿ ಟೊಮೆಟೋ ದರ ಇಳಿಸಲು ನಿರ್ಧರಿಸಿದ್ದಾರೆ.
ದಿಲ್ಲಿ, ನೋಯ್ಡಾ, ಲಖನೌ, ಕಾನ್ಪುರ, ವಾರಾಣಸಿ, ಪಟನಾ, ಮುಜಾಫರ್, ಆಗ್ರಾದಲ್ಲಿ ನ್ಯಾಶನಲ್ ಕೋಪರೇಟಿವ್ ಕನ್‌ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ (NCCF) ಮತ್ತು ನ್ಯಾಶನಲ್ ಅಗ್ರಿಕಲ್ಚರಲ್ ಕೋಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ (NAFED) ಮೂಲಕ, ಪ್ರತಿ ಕೆ.ಜಿಗೆ 80 ರೂ.ಗಳ ಸಗಟು ದರದಲ್ಲಿ ಟೊಮೆಟೋ ಮಾರಾಟವಾಗಲಿದೆ. ಎನ್‌ಸಿಸಿಎಫ್ ದಿಲ್ಲಿ, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ಜನತೆಯ ಅನುಕೂಲಕ್ಕಾಗಿ ಸಬ್ಸಿಡಿ ದರದಲ್ಲಿ ವ್ಯಾನ್‌ಗಳ ಮೂಲಕ ಮಾರಾಟ ಮಾಡುತ್ತಿದೆ.
500ಕ್ಕೂ ಹೆಚ್ಚು ಸ್ಥಳಗಳಲ್ಲಿ ಟೊಮೆಟೋ ದರದ ಪರಿಸ್ಥಿತಿಯನ್ನು ಅವಲೋಕಿಸಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. ದಿಲ್ಲಿ-ಎನಸಿಆರ್ ಮತ್ತು ಇತರ ಕಡೆಗಳಲ್ಲಿ ಜುಲೈ 16ರಿಂದ ಟೊಮೆಟೋ ಸಗಟು ದರವನ್ನು ಕೆ.ಜಿಗೆ 90 ರೂ.ಗಳಿಂದ 80 ರೂ.ಗೆ ಇಳಿಸಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ತಿಳಿಸಿದ್ದಾರೆ.
ರಿಟೇಲ್ ಮಾರುಕಟ್ಟೆಯಲ್ಲಿ ಕೆಲವು ನಗರಗಳಲ್ಲಿ ಈಗಲೂ ಪ್ರತಿ ಕೆ.ಜಿ ಟೊಮೆಟೋ ದರ 250 ರೂ.ಗೆ ಏರಿಕೆಯಾಗಿದೆ. ಮುಂಗಾರು ಮಳೆಯ ಕೊರತೆ, ಬೆಳೆಗೆ ಬಂದಿರುವ ರೋಗದ ಹಾವಳಿಯಿಂದ ಮಾರುಕಟ್ಟೆಗೆ ಪೂರೈಕೆಯಲ್ಲಿ ಭಾರಿ ಕೊರತೆಯಾಗಿದೆ. ಸರ್ಕಾರಿ ಅಂಕಿ ಅಂಶಗಳ ಪ್ರಕಾರ ಟೊಮೆಟೋದ ರಾಷ್ಟ್ರೀಯ ಸರಾಸರಿ ದರ ಪ್ರತಿ ಕೆ.ಜಿಗೆ 117 ರೂ. ಆಗಿದೆ. ದಿಲ್ಲಿಯಲ್ಲಿ ಶನಿವಾರ ವ್ಯಾನ್‌ಗಳ ಮೂಲಕ 18,000 ಕೆ.ಜಿ ಮಾರಾಟವಾಗಿದೆ.
ಕೇಂದ್ರ ಸರ್ಕಾರದ ಪರವಾಗಿ ಎನ್‌ಸಿಸಿಎಫ್ ಮತ್ತು ನಾಫೆಡ್ (NAFFD) ಟೊಮೆಟೋವನ್ನು ಮಾರಾಟ ಮಾಡುತ್ತಿವೆ. ಇದೀಗ ಕೇಂದ್ರ ಸರ್ಕಾರವುಟೊಮೆಟೋದ ಸಗಟು ದರವನ್ನು ಕೆಜಿಗೆ 80 ರೂ.ಗೆ ಇಳಿಸಿರುವುದರಿಂದ ರಿಟೇಲ್ ದರ ಕೂಡ ತಗ್ಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಮೆಟ್ರೊಗಳ ಪೈಕಿ ದಿಲ್ಲಿಯಲ್ಲಿ ಪ್ರತಿ ಕೆ.ಜಿ ಟೊಮ್ಯಾಟೊ ದರ 178 ರೂ, ಮುಂಬಯಿನಲ್ಲಿ 150 ರೂ, ಚೆನ್ನೈನಲ್ಲಿ 132 ರೂ.ಗೆ ಏರಿತ್ತು. ಉತ್ತರ ಪ್ರದೇಶದ ಹಾಪುಡ್‌ನಲ್ಲಿ ಗರಿಷ್ಠ 250 ರೂ.ಗೆ ಏರಿತ್ತು.