ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ ಗೆಲುವು ದಾಖಲಿಸಿದೆ. ಕೆನಡಾ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಅಮೆರಿಕದ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 194 ರನ್ ಬಾರಿಸಿತು.
ಈ ಬೃಹತ್ ಮೊತ್ತವನ್ನು 17.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಅಮೆರಿಕ ಅಮೋಘ ಗೆಲುವು ದಾಖಲಿಸಿತು.
ಈ ಗೆಲುವಿನೊಂದಿಗೆ ಯುಎಸ್ಎ ಗರಿಷ್ಠ ಮೊತ್ತ ಚೇಸ್ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.
ಚೇಸಿಂಗ್ ವೇಳೆ ಅಮೆರಿಕ ಆರಂಭಿಕ ಆಘಾತ ಎದುರಿಸಿತು. ತಂಡ ಖಾತೆ ತೆರೆಯುವ ಮುನ್ನವೇ ಸ್ಟೀವನ್ ಟೇಲರ್(0) ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. 42 ರನ್ ಒಟ್ಟುಗೂಡುವಷ್ಟರಲ್ಲಿ ಮೊನಾಂಕ್ ಪಟೇಲ್(16) ವಿಕೆಟ್ ಕೂಡ ಬಿತ್ತು. ಈ ವೇಳೆ ಜತೆಗೂಡಿದ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಬಿರುಸಿನ ಬ್ಯಾಟಿಂಗ್ ಮೂಲಕ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.
ಉಭಯ ಆಟಗಾರರು ಸೇರಿಕೊಂಡು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈದರು. ಕಿಕ್ಕಿರಿದು ನೆರೆದ ತವರಿನ ವೀಕ್ಷಕರಿಗೆ ಭರಪೂರ ರಂಜನೆ ಲಭಿಸಿತು. ಈ ಜೋಡಿ ಮೂರನೇ ವಿಕೆಟ್ಗೆ ಬರೋಬ್ಬರಿ 131 ರನ್ಗಳ ಅಮೂಲ್ಯ ಜತೆಯಾಟ ನಡೆಸಿತು. ಆಂಡ್ರೀಸ್ ಗೌಸ್ 46 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 65 ರನ್ ಬಾರಿಸಿದರು. ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಆರನ್ ಜೋನ್ಸ್ 40 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್ ಮತ್ತು 4 ಬೌಂಡರಿ ಸಿಡಿಸಿ ಅಜೇಯ 94 ರನ್ ಬಾರಿಸಿದರು. ಗೆಲುವಿಗೆ ನಾಲ್ಕು ರನ್ ಬೇಕಿದ್ದಾಗ ಸಿಕ್ಸರ್ ಬಡಿದಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟುರು.