ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್-8 ಹಂತದ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧ ರೋಚಕ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 195 ರನ್ ಗಳಿಸಿತು. 196 ರನ್ ಗುರಿ ಬೆನ್ನಟ್ಟಿದ ಭಾರತ ತಂಡವು 19.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಪೇರಿಸಿ ಗೆಲುವು ದಾಖಲಿಸಿತು. ಸಂಜು ಸ್ಯಾಮ್ಸನ್ ಅಜೇಯ 97 ರನ್‌ಗಳ ಅದ್ಭುತ ಇನ್ನಿಂಗ್ಸ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಗೆಲುವಿನ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಇದು ಮಾಡು-ಮಡಿ ಸ್ವರೂಪದ ಪಂದ್ಯವಾಗಿದ್ದು, ಆಟಗಾರರು ತೋರಿದ ತಾಳ್ಮೆ ಮತ್ತು ಆತ್ಮವಿಶ್ವಾಸವೇ ಗೆಲುವಿಗೆ ಕಾರಣ ಎಂದು ಹೇಳಿದರು. ಸಂಜು ಸ್ಯಾಮ್ಸನ್ ಶ್ರಮ ಹಾಗೂ ಕಠಿಣ ಪರಿಶ್ರಮದ ಫಲವನ್ನು ಇಂದು ಎಲ್ಲರೂ ಕಂಡಿದ್ದಾರೆ ಎಂದರು. ಬೌಲರ್‌ಗಳು ಯೋಜನೆಯಂತೆ ಬೌಲಿಂಗ್ ಮಾಡಿದ್ದು, 200 ರನ್ ಚೇಸ್ ಸಾಧ್ಯವೆಂಬ ನಂಬಿಕೆ ತಂಡದಲ್ಲಿತ್ತು ಎಂದು ಹೇಳಿದರು.
ಇದನ್ನೂ ಓದಿ:
ತವರಿನಲ್ಲಿ ಆಡಿದ ಒತ್ತಡವನ್ನು ತಂಡ ಸಮರ್ಥವಾಗಿ ನಿಭಾಯಿಸಿದೆ. ಮುಂದಿನ ಸೆಮಿಫೈನಲ್‌ಗೂ ಇದೇ ಉತ್ಸಾಹದೊಂದಿಗೆ ಸಜ್ಜಾಗುತ್ತೇವೆ ಎಂದು ನಾಯಕ ವಿಶ್ವಾಸ ವ್ಯಕ್ತಪಡಿಸಿದರು.



