ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ವ್ಯಾಪ್ತಿಗೆ ಬರುವ ಜಿಲ್ಲೆಗಳಿಗೆ ಜಯನಗರವನ್ನು ಅನುದಾನದಿಂದ ಹೊರಗಿಡುವ ವಿಚಾರ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಂಸದ ತೇಜಸ್ವಿ ಸೂರ್ಯ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿ ವಿಷಯ ಪ್ರಸ್ತಾಪಿಸಿದ್ದರು. ಈ ವಿಚಾರವಾಗಿ ತಗ್ಗಿ-ಬಗ್ಗಿ ನಡೆಯಬೇಕೆಂಬ ಡಿಸಿಎಂ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟ್ವೀಟ್ ಮಾಡಿ, ಹಾಗೆ ಹೇಳಲು ಬೆಂಗಳೂರೇನು ನಿಮ್ಮ ಜಹಗೀರೇ ಎಂದು ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಡಿಕೆ ಶಿವಕುಮಾರ್ ಅವರೇ, ನಿಮ್ಮ ಬಳಿ ತಗ್ಗಿ-ಬಗ್ಗಿ ಇರಬೇಕು ಅನ್ನುವುದಕ್ಕೆ ಬೆಂಗಳೂರು ನಗರವನ್ನು ನಿಮ್ಮ ಜಹಗೀರು ಅಂದುಕೊಡಿದ್ದೀರಾ? ಅಧಿಕಾರ ಎಂಬುದು ಮತದಾರರಿಂದ ಕೈಸೇರುವುದು, ಸಂವಿಧಾನ ನೀಡಿರುವ ಜವಾಬ್ದಾರಿಯೇ ಹೊರತು ಉದ್ಯೋಗವಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ತಗ್ಗಿ-ಬಗ್ಗಿ ನಡೆಯಬೇಕಿರುವುದು ಮತಭಿಕ್ಷೆ ನೀಡಿರುವ ಮತದಾರ ಪ್ರಭುಗಳಿಗೆ, ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಸಂವಿಧಾನಕ್ಕೆ ಹೊರತು ಯಾವ ಯಾವುದೇ ನಾಯಕನಿಗೆ ಅಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.