ಹೊಸದಿಗಂತ ವರದಿ, ಬನವಾಸಿ:
ಯುದ್ದ ಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿಕೊಂಡಿದ್ದ ಇಲ್ಲಿನ ಹೊಸಪೇಟೆ ರಸ್ತೆಯ ನಿವಾಸಿ ಇಮ್ರಾನ್ ನಜೀರ್ ಅಲ್ತಾಫ್ ಚೌದರಿ(21) ಎಂಬ ವಿದ್ಯಾರ್ಥಿಯ ಮನೆಗೆ ಭಾನುವಾರ ಶಿರಸಿ ತಹಶೀಲ್ದಾರ್ ಎಂ.ಆರ್ ಕುಲಕರ್ಣಿ ಭೇಟಿ ನೀಡಿ ಪೋಷಕರಿಗೆ ಭರವಸೆ ನೀಡಿದರು.
ಯುದ್ದ ಪೀಡಿತ ಉಕ್ರೇನ್ ದೇಶದಲ್ಲಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ನೀವು ಧೈರ್ಯವಾಗಿರಿ ಎಂದು ವಿದ್ಯಾರ್ಥಿ ಇಮ್ರಾನ್ ಚೌದರಿ ಅವರ ತಂದೆ ಬನವಾಸಿಯ ಗ್ರಾಮ ಪಂಚಾಯತಿಯ ಸದಸ್ಯ ಅಲ್ತಾಫ್ ಚೌದರಿ ಅವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಗನನ್ನು ನೆನೆದು ಭಾವುಕರಾಗಿ ಮಾತನಾಡಿದ ಅಲ್ತಾಫ್ ಚೌದರಿ, ಇಮ್ರಾನ್ ಕಳೆದ ಮೂರು ವರ್ಷಗಳಿಂದ ವಿನಿಶಿಯಾ ನಗರದ ನ್ಯಾಶನಲ್ ಮೆಮೋರಿಯಲ್ ಪ್ರಿಗೋವ್ ಮೆಡಿಕಲ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದಾನೆ. ನಾವು ಕಲಿಯುವ ಸಂದರ್ಭದಲ್ಲಿ ಬಡತನವಿದ್ದ ಕಾರಣ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಕಷ್ಟ ಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಕಲಿಸುತ್ತಿರುವ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ.
ನಿನ್ನೆಯವರೆಗೆ ಕರೆ ಮಾಡಿ ನಮಗೆ ಧೈರ್ಯವಾಗಿರಿ ನಾನು ಚೆನ್ನಾಗಿದ್ದೆನೆ ಯಾವ ತೊಂದರೆ ಇಲ್ಲ ಎಂದಿದ್ದ. ಸಂಜೆಯ ನಂತರ ದೂರವಾಣಿ ಸಂಪರ್ಕ ಸಿಗುತ್ತಿರಲಿಲ್ಲ. ಮನೆಯವರೆಲ್ಲರೂ ಆತಂಕದಿಂದ ಇದ್ದೆವೂ. ಭಾನುವಾರ ಮುಂಜಾನೆ 10ಗಂಟೆಗೆ ಮೊಬೈಲ್ ಸಂದೇಶ ಕಳಿಸಿ ನಾವು ಅಲ್ಲಿಂದ ಬೇರೆ ಪ್ರದೇಶದ ಗಡಿಯ ಸಮೀಪ ಬಂದಿದ್ದೆವೆ. ತುಂಬಾ ಜನ ಇರುವುದರಿಂದ ಸರದಿ ಸಾಲಿನಲ್ಲಿ ಕಳಿಸಿಕೊಡುತ್ತಿದ್ದಾರೆ. ತ್ರಿವರ್ಣ ಧ್ವಜ ಹಿಡಿದುಕೊಂಡು ಬಂದಿದ್ದೆವೆ. ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದಿರುವುದರಿಂದ ನಮಗೆ ಯಾವ ತೊಂದರೆಯೂ ಆಗುತ್ತಿಲ್ಲ ಎಂದು ಸಂದೇಶದಲ್ಲಿ ತಿಳಿಸಿದ್ದಾನೆ. ನಮ್ಮ ಕಷ್ಟದ ಸಮಯದಲ್ಲಿ ಸಚಿವರು, ಜಿಲ್ಲಾಧಿಕಾರಿಗಳು, ತಾಲೂಕಿನ ಅಧಿಕಾರಿಗಳು, ಗ್ರಾಪಂ, ಮಾಧ್ಯಮ ಮಿತ್ರರು ಸಾಂತ್ವನ ತಿಳಿಸಿ ಧೈರ್ಯ ತುಂಬಿರುವುದಕ್ಕೆ ನಾವು ಸದಾ ಚಿರ ಋಣಿಗಳು. ಸರ್ಕಾರ ಅಲ್ಲಿಂದ ಬರುವಂತಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ನಾಗರಾಜ ಬೊರಕರ್, ಕಂದಾಯ ನಿರೀಕ್ಷಕಿ ಮಂಜುಳ ನಾಯ್ಕ್, ಗ್ರಾಪಂ ಅಧ್ಯಕ್ಷೆ ತುಳಸಿ ಆರೇರ, ಸದಸ್ಯೆ ಗೀತಾ ಚನ್ನಯ್ಯ, ಅಂಗನವಾಡಿ ಮೇಲ್ವಿಚಾರಕಿ ನಿರ್ಮಲಾ, ಹಬೀಬ್ ರಹಮಾನ್ ಚೌದರಿ, ಇಜಾಜ್ ಅಹಮದ್ ಚೌದರಿ, ಅಸ್ಪಕ್ ಅಹಮದ್ ಚೌದರಿ, ಇಕ್ಬಾಲ್ ಅಹಮದ್ ಚೌದರಿ ಇದ್ದರು.