ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿಯಾಗಿದೆ: ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ದೇಶದಲ್ಲಿ ಟಿಬಿ, ಕಾಲಾರಾ, ಮಲೇರಿಯಾ ಹಾಗೂ ಪ್ಲೇಗ್ ರೋಗಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಅವುಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದೇವೆ.
ಅದೇ ರೀತಿ ಪೋಲಿಯೋ ವಿರುದ್ಧದ ನಮ್ಮ ಸಮರ ಅತ್ಯಂತ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದರು.

ಪೋಲಿಯೋ ಮುಕ್ತ ರಾಷ್ಟ್ರವಾದರೂ ಪ್ರತಿ ವರ್ಷ ಮೂರು ದಿನ ಲಸಿಕಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಲಸಿಕಾ ಕಾರ್ಯಕ್ರಮ ಬಹಳ ಮುಖ್ಯ. 25 ವರ್ಷಗಳ ಹಿಂದೆ ಪೋಲಿಯೋ ದುಷ್ಪರಿಣಾಮಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅಂಗವಿಲಕತೆಗೆ ಮುಖ್ಯ ಕಾರಣ ಹಾಗೂ ದೊಡ್ಡ ಪ್ರಮಾಣದ ಜೀವ ಹಾನಿಗೆ ಪೋಲಿಯೋ ಕಾರಣವಾಗಿತ್ತು. ಮಕ್ಕಳಿಗೆ ಬರುವ ಈ ಕಾಯಿಲೆ ದೇಹವನ್ನು ನಿಷ್ಕ್ರಿಯ ಮಾಡಿ ಕ್ಷೋಭೆಯನ್ನುಂಟು ಮಾಡಿತ್ತು. ಆ ಸಂದರ್ಭದಲ್ಲಿ ಕೋವಿಡ್ ಗೆ ನಡೆದ ಹೋರಾಟದಂತೆಯೇ ಹೋರಾಟ ನಡೆದು ಓರಲ್ ಲಸಿಕೆ ಬಂದ ನಂತರ ನಿಯಂತ್ರಣಕ್ಕೆ ತರಲಾಯಿತು. ಪ್ರಗತಿ ಪರ ರಾಷ್ಟ್ರಗಳ ನಡುವೆ ಭಾರತದಲ್ಲಿ ತಳಮಟ್ಟದಿಂದ ಆಗುವ ಅಭಿಯಾನದ ಅನುಷ್ಠಾನ ಬೇರೆ ದೇಶಗಳಲ್ಲಿ ಕಾಣುವುದಿಲ್ಲ. ಬಡತನ, ಅಪೌಷ್ಟಿಕತೆ ಇರುವಲ್ಲಿ ಈ ರೀತಿಯ ರೋಗಗಳಿಗೆ ಹೆಚ್ವಿನ ಅವಕಾಶವಿರುವುದರಿಂದ ಜನರು ಕೂಡ ಜಾಗೃತರಾಗಿದ್ದರೆ ಎಂದರು.

ಪ್ರಧಾನಮಂತ್ರಿಗಳು ಸಹ ಇಂದು ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅವರ ಚಿಂತನೆಗಳು ವೈಜ್ಞಾನಿಕವಾಗಿವೆ. ಸ್ವಚ್ಛ ಭಾರತ ಯೋಜನೆಯಿಂದ ಹಲವಾರು ರೋಗರುಜಿನಗಳು ದೂರವಿಡಬಹುದು. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದು ಒಂದೆಡೆಯಾದರೆ, ಪ್ರತಿಯೊಬ್ಬ ವ್ಯಕ್ತಿಯ ಸ್ವಾಸ್ಥ್ಯವನ್ನು ಉತ್ತಮವಾಗಿಡಲು ಯೋಗ ಸಹಕಾರಿ ಎಂದರು.

ಲಸಿಕೆ ಮೂಲಕ ಕೋವಿಡ್ ನಿಯಂತ್ರಣ:
ಕೋವಿಡ್ ನಿಯಂತ್ರಿಸಲು ಸಹ ಪ್ರಧಾನಿಗಳು ಲಸಿಕಾ ಅಭಿಯಾನಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡಿ ಅಭಿಯಾನವನ್ನು ಪ್ರಾರಂಭಿಸಿದರು. ಮೊದಲ ಹಾಗೂ ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಭಾರತದಲ್ಲಿಯೇ ಲಸಿಕೆ ತಯಾರಿಸಿ, ವಿದೇಶಗಳಿಗೂ ರಫ್ತು ಮಾಡಲಾಗಿದೆ. ಇದರ ಶ್ರೇಯಸ್ಸು ಲಸಿಕೆ ತಯಾರಿಸಿದ ವಿಜ್ಞಾನಿಗಳಿಗೆ ಹಾಗೂ ದೇಶದ 130 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದರು.

ಪಂಚಮಸಾಲಿ ಶ್ರೀವಚನಾನಂದ ಸ್ವಾಮಿಗಳು ಯೋಗದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಜನರಿಗೆ ಯೋಗವನ್ನು ಕಲಿಸುತ್ತಾ ಶ್ವಾಸ ಗುರು ಎಂಬ ಬಿರುದು ಸಹ ಪಡೆದಿದ್ದಾರೆ. ಆರೋಗ್ಯ ಬಹಳ ಮುಖ್ಯ. ಕರ್ನಾಟಕ ರಾಜ್ಯ ಆರೋಗ್ಯಕ್ಕೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಇದು ಮುಂದುವರೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ವಚನಾನಂದ ಸ್ವಾಮಿಗಳು ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!