ತಹಶೀಲ್ದಾರ್ ತಪ್ಪು, ಕಣ್ಣನ್ ಅವರದ್ದಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಮಗಳೂರಿನ (Chikkamagalur) ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ (Hiremagaluru Kannan) ಅವರ ವೇತನ ವಾಪಸ್ ಕೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದೆ. ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್‌ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಥಳೀಯ ತಹಶೀಲ್ದಾರ್‌ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ ಎಂದರು.

ಪ್ರತಿವರ್ಷ ದೇವಸ್ಥಾನಕ್ಕೆ ತಸ್ತಿಕ್ ಹಣ ಅಂತ ಕೊಡ್ತಾರೆ. ಮುಜರಾಯಿ ದೇವಸ್ಥಾನಗಳಿಗೆ ಈ ಹಣ ಕೊಡ್ತಾರೆ. 2013 ರಲ್ಲಿ 24 ಸಾವಿರ ತಸ್ತಿಕ್ ಹಣ ಇತ್ತು, ತಹಶೀಲ್ದಾರ್ 24 ಸಾವಿರ ಕೊಡುವ ಬದಲು 90 ಸಾವಿರ ಹಣ ನೀಡಿದ್ದಾರೆ. ತಹಶೀಲ್ದಾರ್ ತಪ್ಪು ಇದು.. ಕಣ್ಣನ್ ಅವ್ರ ತಪ್ಪಲ್ಲ ಎಂದು ಹೇಳಿದರು.

ತಹಶೀಲ್ದಾರ್ ಬಳಿಯೇ ಹಣ ಪಡೆಯುತ್ತೇವೆ. ಕಣ್ಣನ್ ಅವರ ಬಳಿ ಹಣ ಕೇಳಲ್ಲ. ನಾನು ಆಯುಕ್ತರ ಜೊತೆ ಈ ಬಗ್ಗೆ ಮಾತನಾಡ್ತೇನೆ. ತಲೆ ಸರಿಯಿಲ್ಲದವರು ಈ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನ ಹೇಳ್ತಿದ್ದಾರೆ. 10 ವರ್ಷದ ಹಣವನ್ನ ತಹಶೀಲ್ದಾರ್ ರಿಂದಲೇ ವಸೂಲಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

24 ಸಾವಿರ ಹಣದ ಬದಲು 90 ಸಾವಿರ ಹಣವನ್ನ ತಹಶೀಲ್ದಾರ್ ಕೊಟ್ಟಿದ್ದಾರೆ. 24 ಸಾವಿರ ಹಣ ಕೊಡುವ ಜಾಗದಲ್ಲಿ 90 ಸಾವಿರ ಹಣ ಕೊಟ್ಟಿದ್ದು ತಹಶೀಲ್ದಾರ್ ದು ತಪ್ಪು. ಹೀಗಾಗಿ ಅವರಿಂದಲೇ ಈ ಹಣವನ್ನು ರಿಕವರಿ ಮಾಡುತ್ತೇವೆ. ರಾಜ್ಯದಲ್ಲಿ ಇದೇ ಮೊದಲ ಘಟನೆ ಎಂದು ಅವರು ಹೇಳಿದರು.

ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ, ಇದೀಗ ದೇವಾಲಯದ ಆದಾಯ ಕಡಿಮೆ‌ ಇದೆ ಎಂಬ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು. 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿತ್ತು. ಜತೆಗೆ, ಡಿಸೆಂಬರ್ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್​ 2ರಂದು ತಹಶಿಲ್ದಾರ್ ಸುಮಂತ್ ನೋಟಿಸ್​ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!