ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ನಿರ್ಗಮನದೊಂದಿಗೆ ಅಪ್ಘಾನಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರೋ ತಾಲೀಬಾನ್ ಇದೀಗ ತೈಲ ಉತ್ಪಾದನೆಗೆ ಚೀನಿ ಸಂಸ್ತೆಯೊಂದಿಗೆ ಮೊದಲ ಅಂತರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಿದೆ. ಅಪ್ಘಾನಿಸ್ತಾನದ ಉತ್ತರ ಅಮು ದರಿಯಾ ಪ್ರದೇಶದಿಂದ ತೈಲ ಹೊರತೆಗೆಯಲು ಚೀನಾದ ನ್ಯಾಷನಲ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಅಂಗಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಕಾಬೂಲ್‌ನಲ್ಲಿ ಅಫ್ಘಾನಿಸ್ತಾನದ ಚೀನಾ ರಾಯಭಾರಿ ವಾಂಗ್ ಯು ಮತ್ತು ತಾಲಿಬಾನ್‌ನ ಆರ್ಥಿಕ ವ್ಯವಹಾರಗಳ ಉಪ ಪ್ರಧಾನ ಮಂತ್ರಿ ಮುಲ್ಲಾ ಅಬ್ದುಲ್ ಘನಿ ಬರಾದರ್ ಅವರ ಸಮ್ಮುಖದಲ್ಲಿ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಒಪ್ಪಂದದ ಪ್ರಕಾರ, ಕ್ಸಿನ್‌ಜಿಯಾಂಗ್ ಸೆಂಟ್ರಲ್ ಏಷ್ಯಾ ಪೆಟ್ರೋಲಿಯಂ ಮತ್ತು ಗ್ಯಾಸ್ ಕಂಪನಿಯು ಐದು ತೈಲ ಮತ್ತು ಅನಿಲ ಬ್ಲಾಕ್‌ಗಳನ್ನು ಅನ್ವೇಷಿಸಲು ಮೊದಲ ವರ್ಷದಲ್ಲಿ 150 ಮಿಲಿಯನ್ ಡಾಲರ್ ಮತ್ತು ಮುಂದಿನ ಮೂರು ವರ್ಷಗಳಲ್ಲಿ 540 ಮಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಗಣಿ ಮತ್ತು ಪೆಟ್ರೋಲಿಯಂನ ಉಸ್ತುವಾರಿ ಸಚಿವ ಶಹಾಬುದ್ದೀನ್ ದೆಲಾವರ್ ಹೇಳಿದ್ದಾರೆ ಎನ್ನಲಾಗಿದೆ.
2021 ರಲ್ಲಿ US ಪಡೆಗಳನ್ನು ಹಿಂತೆಗೆದುಕೊಂಡ ನಂತರ ಅಪ್ಘಾನಿಸ್ತಾನಕ್ಕೆ ಅಂತರಾಷ್ಟ್ರೀಯ ನೆರವು ಸ್ಥಗಿತಗೊಂಡಿದೆ. ಹೀಗಾಗಿ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸರಿಪಡಿಸಲು ತಾಲಿಬಾನ್ ಹೂಡಿಕೆಗಳನ್ನು ಬಯಸುತ್ತಿದೆ. ಅಫ್ಘಾನಿಸ್ತಾನದಲ್ಲಿ ಹೂಡಿಕೆ ಮಾಡಲು ಅಂತರಾಷ್ಟ್ರೀಯ ಕಂಪನಿಗಳಿಗೆ ತಾಲೀಬಾನ್ ಆಹ್ವಾನ ನೀಡುತ್ತಿದೆ. ಇತ್ತೀಚೆಗಷ್ಟೇ ಮಹಿಳೆಯರ ಮೇಲಿನ ನಿರ್ಬಂಧದ ಕುರಿತು ತಾಲೀಬಾನ್ ಆಡಳಿತದ ವಿರುದ್ಧ ವ್ಯಾಪಕ ಖಂಡನೆಗಳು ವ್ಯಕ್ತವಾಗಿದ್ದವು. ವಿಶ್ವ ಸಂಸ್ಥೆಯೂ ಕೂಡ ಮಾನವೀಯ ನೆರವುಗಳನ್ನು ನೀಡುವುದನ್ನು ನಿಲ್ಲಿಸುವುದಾಗಿ ಹೇಳಿತ್ತು. ಇವೆಲ್ಲವುಗಳ ನಡುವೆಯೇ ಈ ಒಪ್ಪಂದ ನಡೆದಿದೆ.