ಹೊಸದಿಗಂತ ಡಿಜಿಟಲ್ ಡೆಸ್ಕ್
ಈಗಾಗಲೇ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬರಲು ಸಹಕಾರ ನೀಡಿದ ಪಾಕಿಸ್ತಾನಕ್ಕೆ ಈಗ ಸ್ವತಃ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.
ಇತ್ತೀಚೆಗೆ ಹಲವಾರು ಬಾರಿ ವೈಮಾನಿಕ ದಾಳಿಯನ್ನು ನಡೆಸಿರುವ ಪಾಕ್ಗೆ ತಾಲಿಬಾನ್ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದ್ದು,ಒಂದು ವೇಳೆ ಇದೇ ರೀತಿಯಲ್ಲಿ ದಾಳಿಯನ್ನು ಮುಂದುವರೆಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇತ್ತೀಚೆಗೆ ಆಫ್ಘನ್ನ ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳ ಮೇಲೆ ಪಾಕ್ ವೈಮಾನಿಕ ದಾಳಿಯನ್ನು ನಡೆಸಿ ಸುಮಾರು 60 ನಾಗರಿಕರನ್ನು ಕೊಂದಿತ್ತು.
ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಆಫ್ಘಾನಿಸ್ತಾನದ ಮಾಹಿತಿ ಮತ್ತು ಸಂಸ್ಕೃತಿ ಸಚಿವ ಹಾಗೂ ತಾಲಿಬಾನ್ ಸರ್ಕಾರದ ವಕ್ತಾರರಾದ ಜಬೀವುಲ್ಲಾ ಮುಜಾಹಿದ್, ಪಾಕಿಸ್ತಾನವು ಆಫ್ಘಾನಿಸ್ತಾನದ ಜನರ ತಾಳ್ಮೆಯನ್ನು ಪರೀಕ್ಷಿಸಬಾರದು. ಒಂದು ವೇಳೆ ತಾಳ್ಮೆಯನ್ನು ಪರೀಕ್ಷಿಸಲು ಮುಂದಾದರೆ, ಗಂಭೀರ ಪರಿಣಾಮಗಳನ್ನು ಎದುರಿಸಲು ಸಿದ್ಧವಾಗಿರಬೇಕು ಎಂದಿದ್ದಾರೆ.
ಇತ್ತೀಚೆಗಷ್ಟೇ ಆಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯವು ಕಾಬೂಲ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅವರನ್ನು ಸಚಿವಾಲಯಕ್ಕೆ ಕರೆಸಿ, ಈ ವಿಚಾರವಾಗಿ ಚರ್ಚೆ ನಡೆಸಿದ್ದು, ಭವಿಷ್ಯದಲ್ಲಿ ಇಂತಹ ದಾಳಿಗಳನ್ನು ತಡೆಯುವಂತೆ ಮನವಿ ಮಾಡಿದೆ ಎಂದು ಖಾಮಾ ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.