ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮಹಿಳೆಯರಿಗೆ ಮಸೀದಿಗೆ ಪ್ರವೇಶ ನೀಡಲಿ: ಸಚಿವ ಸುನೀಲ್

ಹೊಸದಿಗಂತ ವರದಿ, ಮಂಗಳೂರು:

ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವವರು ಮೊದಲು ಮುಸ್ಲಿಂ ಸಮುದಾಯದ ಮಹಿಳೆಯರು ಮಸೀದಿ ಪ್ರವೇಶಿಸಲು ಅವಕಾಶ ಕಲ್ಪಿಸಲಿ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಸವಾಲು ಹಾಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಉಸ್ತುವಾರಿ ಸಚಿವರ ನೂತನ ಕಚೇರಿ ಉದ್ಘಾಟನೆ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯನವರನ್ನಾದಿಯಾಗಿ ಕೆಲವರು ಹಿಜಾಬ್ ಹಾಕುವಂತದ್ದು ವ್ಯಕ್ತಿ ಸ್ವಾತಂತ್ರ್ಯ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಹಾಗಾದರೆ ಮಹಿಳೆಯರಿಗೆ ಮಸೀದಿಯೊಳಗೆ ನೀಡಲಿ. ಯಾಕೆ ಪ್ರವೇಶ ನೀಡುತ್ತಿಲ್ಲ ಎಂದು ಸುನೀಲ್ ಪ್ರಶ್ನಿಸಿದರು.
ಮಹಿಳೆಯರಿಗೆ ಎಲ್ಲಾ ಕಡೆ ಪ್ರವೇಶ ನಿರಾಕರಣೆ ಮಾಡುವವರು ಸರಕಾರಿ ಶಾಲೆಗಳಿಗೆ ಹೀಗೇ ಬರಬೇಕು ಎಂದು ನಿಯಮಾವಳಿ ರೂಪಿಸುವುದನ್ನು ಯಾವುದೇ ಕಾರಣಕ್ಕೂ ಸರಕಾರ ಸಹಿಸುವುದಿಲ್ಲ. ನಮ್ಮ ರಾಜ್ಯದಲ್ಲಿ ಸರಕಾರಿ ಶಾಲೆಗಳಲ್ಲಿ, ಅಥವಾ ಖಾಸಗಿ ಶಾಲೆಗಳಲ್ಲಿ ವಸ್ತ್ರಸಂಹಿತೆ ಸಾಂಪ್ರದಾಯಿಕವಾಗಿ ಬಂದಿದೆ. ಕಾನೂನಿನ ಚೌಕಟ್ಟನ್ನು ಹೇಗೆ ಕೊಡಬೇಕೆಂಬುದರ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದವರು ಹೇಳಿದರು.
ತ್ರಿಬಲ್ ತಿಲಾಕ್‌ನ್ನು ರದ್ದು ಮಾಡಿ ಭದ್ರತೆ ನೀಡಿದ್ದು ಮೋದಿ ಸರಕಾರ. ಮುಸ್ಲಿಂ ಮಹಿಳೆಯರು ಇದನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬರುವ ಪ್ರಯತ್ನ ಮಾಡಬೇಕು. ಶಾಲೆಯ ನೆಪದಲ್ಲಿ ಎಸ್‌ಡಿಪಿಐನವರೋ, ಸಿದ್ದರಾಮಯ್ಯನವರೋ ಖಾದರ್‌ರವರೋ ಹೇಳಿಕೆಗಳನ್ನು ಕೊಟ್ಟ ಮಾತ್ರಕ್ಕೆ ಇದರ ಹಿಂದೆ ಹೋಗುವುದು ಸರಿಯಲ್ಲ ಎಂದು ಸಚಿವರು ಹೇಳಿದರು.
ಹಿಜಾಬ್ ಪ್ರಕರಣ ಒಂದು ವ್ಯವಸ್ಥಿತ ಷಡ್ಯಂತ್ರ. ಹಿಜಾಬ್, ಬುರ್ಕಾ ಇತ್ಯಾದಿಗಳನ್ನು ಮನೆಯಿಂದ ಶಾಲೆಯ ಕಂಪೌಂಡ್ ತನಕ ಹಾಕಿಕೊಂಡು ಬರಲಿ. ಶಾಲೆಯ ಒಳಗೆ ಬರಬೇಕಾದರೆ ಶಾಲೆಯ ಸಮವಸ್ತ್ರದಲ್ಲಿ ಇರಬೇಕೆಂಬುದು ಸಂಪ್ರದಾಯ. ಇಲ್ಲಿಯ ತನಕ ಅದು ಸರಿಯಾಗಿಯೇ ನಡೆದುಕೊಂಡು ಬರುತ್ತಿದೆ. ಆದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವರು ಹೊರಟಿದ್ದಾರೆ. ಇದಕ್ಕಾಗಿ ಕೆಲವೇ ವಿದ್ಯಾರ್ಥಿಗಳನ್ನು ಎದುರುಬಿಟ್ಟು ಈ ರೀತಿಯ ಪ್ರಕರಣ ಸೃಷ್ಟಿಸುತ್ತಿದ್ದಾರೆ ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಗೋ ಸಾಗಾಟ, ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ ಎಂದು ಸುನೀಲ್ ಕುಮಾರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!