ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಕ್ಕಿಂನ ಮುಖ್ಯಮಂತ್ರಿಯಾಗಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್‌ಕೆಎಂ) ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಜೂನ್ 10 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಇಂದು ಮಿಂಟೋಕ್‌ಗ್ಯಾಂಗ್‌ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ತಮಾಂಗ್ ಮತ್ತು ಸಚಿವರ ಪ್ರದಗ್ರಹಣ ಸಮಾರಂಭ ಜೂನ್ 10 ರಂದು ಪಲ್ಜೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಭೆಯಲ್ಲಿ ಮಾತನಾಡಿದ ಪ್ರೇಮ್ ಸಿಂಗ್ ತಮಾಂಗ್, ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಕೂಟವನ್ನು ಅಭಿನಂದಿಸುತ್ತೇವೆ. ನಮ್ಮ ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಎನ್‌ಡಿಎಗೆ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷ ಬೆಂಬಲ ನೀಡಲಿದೆ ಎಂದು ಹೇಳಿದರು.
ಸಿಕ್ಕಿಂ ಜನತೆಗೆ ಮತ್ತು ಎಸ್‌ಕೆಎಂಗೆ ಮತ್ತೊಮ್ಮೆ ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಿಕ್ಕಿಂ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ಎಸ್‌ಕೆಎಂ 32 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದ್ದು, ಜೊತೆಗೆ ಏಕೈಕ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.