ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ತಾರೆಯರ ಕುರಿತು ಅಭಿಮಾನಿಗಳ ಕ್ರೇಜ್ ಎಷ್ಟೆಂದು ವಿಶೇಷವಾಗಿ ಹೇಳಬೇಕಾಗಿಲ್ಲ. ಎಲ್ಲಿ ಕಾಣಿಸಿಕೊಂಡರೂ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಪೈಪೋಟಿ ನಡೆಸುತ್ತಾರೆ. ಒಮ್ಮೊಮ್ಮೆ ಅಭಿಮಾನಿಗಳ ನಡೆಗೆ ತಾರೆಯರು ಸಂಕಷ್ಟಕ್ಕೆ ಸಿಲುಕಿದ ಘಟನೆಗಳೂ ನಡೆಯುತ್ತಿವೆ. ಇದೀಗ ಮಿಲ್ಕಿ ಬ್ಯೂಟಿ ತಮನ್ನಾಗೆ ಕೇರಳಕ್ಕೆ ಹೋಗಿದ್ದ ವೇಳೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ.
ಕೇರಳದ ಕೊಲ್ಲಂನಲ್ಲಿ ಶಾಪಿಂಗ್ ಮಾಲ್ ಒಂದರ ಉದ್ಘಾಟನೆಗೆ ತಮನ್ನಾ ಹೋಗಿದ್ದರು. ಮಿಲ್ಕಿ ಬ್ಯೂಟಿ ಆಗಮನದ ಸುದ್ದಿ ತಿಳಿದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಜಮಾಯಿಸಿದ್ದು, ಉದ್ಘಾಟನಾ ಸಮಾರಂಭದ ನಂತರ ಅಭಿಮಾನಿಗಳ ಬಳಿ ಬಂದು ಕೈಬೀಸುತ್ತಿದ್ದಾಗ ಏಕಾಏಕಿ ಅಭಿಮಾನಿಯೊಬ್ಬ ಇವರತ್ತ ನುಗ್ಗಿ ಬಂದರು. ಸುತ್ತಲೂ ಬೌನ್ಸರ್ಗಳು, ಪೊಲೀಸ್ ಭದ್ರತೆಯಿದ್ದರೂ ಯುವಕ ಅದ್ಯಾವುದನ್ನೂ ಲೆಕ್ಕಿಸದೆ ನಟಿ ಬಳಿ ಬಂದ ವಿಡಿಯೋ ವೈರಲ್ ಆಗಿದೆ.
ತಕ್ಷಣ, ಬೌನ್ಸರ್ಗಳು ಅವರನ್ನು ಪಕ್ಕಕ್ಕೆ ಎಳೆದರೂ..ಅಭಿಮಾನಿಯ ಉತ್ಸಾಹ ಗಮನಿಸಿದ ತಮನ್ನಾ ಬೌನ್ಸರ್ಗಳನ್ನು ತಡೆದು, ಅಭಿಮಾನಿಯೊಂದಿಗೆ ಕೈ ಕುಲುಕಿ, ಸೆಲ್ಫಿಗೆ ಪೋಸ್ ಕೊಟ್ಟರು. ತಮನ್ನಾ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆಕೆಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.